Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ. ಜನರಿಗೆ ದಿನಸಿ ನಡೆದುಕೊಂಡೇ ಕೊಂಡೊಯ್ಯುವ ಶಿಕ್ಷೆ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯಾದ್ಯಂತ ಜಾರಿಯಾಗಿರುವ ಲಾಕ್‌ಡೌನ್ ಮೊದಲ ದಿನ ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಜನರು ಕಾಲ್ನಡಿಗೆಯಲ್ಲಿಯೇ ಪೇಟೆಗಳಿಗೆ ತೆರಳಿ ಸಾಮಾಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಆಸ್ಪತ್ರೆ ಮೊದಲಾದ ಅನುಮತಿ ನೀಡಲಾಗಿರುವ ಸೇವೆಗಳಿಗೆ ತೆರಳುವರ ವಾಹನವನ್ನು ಪೊಲೀಸರು ವಿಚಾರಿಸಿ ನಗರದೊಳಕ್ಕೆ ಪ್ರವೇಶ ನೀಡುತ್ತಿದ್ದರು. ನಿಯಮ ಮೀರಿ ಸಂಚರಿಸಿದ ವಾಹನಗಳನ್ನು ಕುಂದಾಪುರದಲ್ಲಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡರು. ಕುಂದಾಪುರ ನಗರ ಠಾಣೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕಾರು, ಬೈಕು ಸೇರಿದಂತೆ ಒಟ್ಟು 61 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕಠಿಣ ಕ್ರಮಗಳನ್ನು ಅನುಸರಿಸಿ ಅನಗತ್ಯ ಸಂಚಾರಕ್ಕೆ ಬೇಕ್ ಹಾಕಲಾಗಿತ್ತು.

ದಿನಸಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಖರೀದಿಸಲು ಬಂದವರು ಪಡಿತರವನ್ನು ಹೊತ್ತುಕೊಂಡೇ ತೆರಳಬೇಕಾದ ಅನಿವಾರ್ಯತೆ ಎದುರಾಯಿತು. ಗ್ರಾಮೀಣ ಭಾಗದ ಜನರು ಕೆಲವೆಡೆ ವಾಹನಗಳಲ್ಲಿ ಕೊಂಡೊಯ್ದರೆ, ಹಲವರು ತಲೆಯ ಮೇಲೆ ಹೊತ್ತುಕೊಂಡೇ ಮನೆಗೆ ಸಾಗಬೇಕಾಯಿತು. ಬೈಂದೂರು, ಕೊಲ್ಲೂರು, ಗಂಗೊಳ್ಳಿ, ಶಂಕರನಾರಾಯಣ, ಅಮಾಸೆಬೈಲು, ಕುಂದಾಪುರ ಗ್ರಾಮಾಂತರ, ಕೋಟ ಠಾಣಾ ವ್ಯಾಪ್ತಿಯಲ್ಲಿ ಬಹುತೇಕ ಜನಸಂಚಾರ ವಿರಳವಾಗಿತ್ತು.

ಕುಂದಾಪುರ ಡಿವೈಎಸ್ಪಿ ಕೆ. ಶ್ರೀಕಾಂತ, ವೃತ್ತ ನಿರೀಕ್ಷಕರುಗಳಾದ ಗೋಪಿಕೃಷ್ಣ, ಸಂತೋಷ್ ಕಾಯ್ಕಿಣಿ, ಕುಂದಾಪುರ ಪಿಸೈ ಸದಾಶಿವ ಗವರೋಜಿ, ಕೊಲ್ಲೂರು ಪಿಸೈ ಗಳಾದ ನಾಸೀರ್ ಹುಸೇನ್, ಶಂಕರನಾರಾಯಣ ಪಿಸೈ ಶ್ರೀಧರ ನಾಯಕ್, ಅಮಾಸೆಬೈಲು ಪಿಸೈ ಸುಬ್ಬಣ್ಣ, ಕುಂದಾಪುರ ಟ್ರಾಫಿಕ್ ಪಿಸೈ ಸುದರ್ಶನ ಹಾಗೂ ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸರು ಬಂದೋವಸ್ತ್ ಏರ್ಪಡಿಸಿದ್ದರು.

► ಉಡುಪಿ ಜಿಲ್ಲೆಯಲ್ಲಿ ಸೋಮವಾರ 855 ಕೋವಿಡ್ ಪಾಸಿಟಿವ್, 3 ಸಾವು, 642 ಮಂದಿ ಗುಣಮುಖ  – https://kundapraa.com/?p=48089 .

Exit mobile version