Kundapra.com ಕುಂದಾಪ್ರ ಡಾಟ್ ಕಾಂ

ಕಲ್ಲಂಗಡಿ ಬೆಳೆಗಿಲ್ಲ ಬೆಲೆ. ಸೂಕ್ತ ಮಾರುಕಟ್ಟೆ ಇಲ್ಲದೇ ನಷ್ಟ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಲಾಕ್‌ಡೌನ್ ಹಾಗೂ ಅಕಾಲಿಕ ಮಳೆಯಿಂದಾಗಿ ಕಲ್ಲಂಗಡಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಮಾಡಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಕಲ್ಲಂಗಡಿ ಹಣ್ಣು ಕೊಳೆತು ಹೋಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಶಿರೂರಿನಿಂದ ಹೆಮ್ಮಾಡಿಯ ತನಕ ಸುಮಾರು 150 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಯಲ್ಲಿ ಎರಡನೇ ಬೆಳೆಯಾಗಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಕಿರಿಮಂಜೇಶ್ವರ, ಹೇರೂರು ಕಂಬದಕೋಣೆ ಗ್ರಾಮದಲ್ಲಿ ಬಹುತೇಕ ಕೃಷಿಕರು ಎರಡನೇಯ ಬೆಳೆಯಾಗಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಈ ಭಾರಿ ಕಟಾವಿನ ಸಂದರ್ಭದಲ್ಲಿಯೇ ಲಾಕ್‌ಡೌನ್ ಘೋಷಣೆಯಾದ್ದರಿಂದ ಕಲ್ಲಂಗಡಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಹೊರ ರಾಜ್ಯ ವಹಿವಾಟಿಗೆ ಹೊಡೆತ ಬಿದ್ದಿರುವುದರಿಂದ ಎಲ್ಲಾ ಬೆಳೆಯನ್ನು ಸ್ಥಳೀಯವಾಗಿ ಮಾರಾಟ ಮಾಡಬೇಕಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಹಾಗೂ ಜ್ಯೂಸ್ ಅಂಗಡಿಗಳಿಗೆ ಬೀಗ ಬಿದ್ದಿರುವುದರಿಂದ ಕಲ್ಲಂಗಡಿ ಬೆಳೆ ಕೇಳುವವರಿಲ್ಲದಂತಾಗಿದೆ. ಪರಿಣಾಮ ದರ ಕುಸಿದಿದೆ.

ಸ್ಥಳೀಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಕಲ್ಲಂಗಡಿಗೆ ಮಾರುಕಟ್ಟೆ ಸಮಸ್ಯೆಯಿಂದಾಗಿ ರೈತರಿಗೆ ಸೂಕ್ತ ಬೆಲೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಒಂದೆರೆಡು ವರ್ಷ ಹಿಂದೆ ಈ ಭಾಗದ ಕಲ್ಲಂಗಡಿ ಹಣ್ಣುಗಳಿಗೆ ತಮಿಳುನಾಡು ಕೇರಳದಲ್ಲಿ ಬಹಳ ಬೇಡಿಕೆ ಇತ್ತು. ಈಗ ಒಂದೆಡೆ ಬೇಡಿಕೆ ಕುಸಿದಿದೆ. ಲಾಕ್‌ಡೌನ್‌ನಲ್ಲಿ ಸಾಗಾಟ ಮಾರಾಟಕ್ಕೂ ಸಂಕಷ್ಟ ಎದುರಾಗಿದೆ. ಕಳೆದ ಭಾರಿಯೂ ರೈತರು ನಷ್ಟ ಅನುಭವಿಸಿದ್ದು, ಈ ಭಾರಿಯಾದರೂ ಚೇತರಿಸಿಕೊಳ್ಳುವ ಭರವಸೆ ಇತ್ತು. ಆದರೆ ಚೇತರಿಸಿಕೊಳ್ಳುವ ಬದಲಿಗೆ ಮತ್ತಷ್ಟು ಸಾಲದ ಹೊರೆ ರೈತರ ಹೆಗಲೇರಿದೆ.

Exit mobile version