Kundapra.com ಕುಂದಾಪ್ರ ಡಾಟ್ ಕಾಂ

ಕಣ್ಣೀರು ತರಿಸೋ ಈರುಳ್ಳಿ ಸಾಮಾಜಿಕ ತಾಣದಲ್ಲಿ ನಗಿಸಿತು

ದಿನವೂ ಕತ್ತರಿಸುವಾಗಲಷ್ಟೇ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಒಂದು ತಿಂಗಳಿನಿಂದ ಕೊಳ್ಳುವಾಗಲೇ ಕಣೀರು ಹಾಕಿಸುತ್ತಿದೆ. ಒಂದೇ ಸವನೆ ಗಗನಕ್ಕೇರಿದ ಈರುಳ್ಳಿಯ ಬೆಲೆಗೆ ಗ್ರಾಹಕರಂತೂ ಕಂಗಾಲಾಗಿ ಹೋಗಿದ್ದರು. ಒಂದೆರಡು ದಿನಗಳಿಂದೀಚೆಗೆ ಈರುಳ್ಳಿಯ ಬೆಲೆ ಇಳಿಯುವ ಸೂಚನೆ ಏನೋ ದೊರೆತಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಈ ನಡುವೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸಪ್ ನಲ್ಲಿ ಈರುಳ್ಳಿಯ ಬಗೆಗೆ ನೂರಾರು ಜೋಕುಗಳು ಹರಿದಾಡುತ್ತಿದ್ದವು. ಈರುಳ್ಳಿಯ ಬಗೆಗೆ ಜಾಲತಾಣದಲ್ಲಿ ಹುಟ್ಟಿಕೊಂಡ ಈ ಈರುಳ್ಳಿ ಜೋಕುಗಳನ್ನು ಹಲವರು ಈಗಾಗಲೇ ನೋಡಿ ಖಂಡಿತವಾಗಿಯೂ ನಕ್ಕಿರುತ್ತಾರೆ.

ಅದರಲ್ಲೂ ಹದಿನೈದು ದಿನಗಳಿಂದೀಚೆಗೆ ಈರುಳ್ಳಿಯ ಬಗೆಗೆ ಹತ್ತಾರು ವಿಡಂಬನಾತ್ಮಕವಾದ ಜೋಕುಗಳು ಹುಟ್ಟಿಕೊಂಡಿದ್ದವು. ಅದು ರಜನಿಕಾಂತ್ ಜೋಕಿನಷ್ಟೇ ಪ್ರಸಿದ್ಧಿಯನ್ನೂ ಪಡೆದವು. ಈರುಳ್ಳಿ ಜೋಕಿನಲ್ಲಿ ಚಿತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದು ವಿಶೇಷವಾಗಿತ್ತು.

ಜೂಜಾಡುವವರು ಹಣದ ಬದಲಾಗಿ ಈರುಳ್ಳಿ ಇಟ್ಟುಕೊಂಡಿದ್ದು, ಪ್ರೀಯತಮೆಗೆ ಈರುಳ್ಳಿಯ ಉಂಗುರದ ಉಡುಗೊರೆ, ಸಿಮ್ ಕಾರ್ಡ್ ಪೋರ್ಟ್ ಮಾಡಿಕೊಂಡರೆ ಒಂದು ಕೆ.ಜಿ. ಈರುಳ್ಳಿ ಉಚಿತ, ಹೀಗೆ ಗಾದೆ ಮಾತು, ಚಿತ್ರರಂಗ, ಮೊದಲಾದ ಕ್ಷೇತ್ರಕ್ಕೆ ಸಂಬಂಧಿಸಿ ಕಲ್ಪಿತ, ತಿರುಚಿದ ಈರುಳ್ಳಿ ಜೋಕುಗಳು ಸೃಷ್ಟಿಯಾಗಿದ್ದವು. ಇನ್ನೂ ಈರುಳ್ಳಿಯನ್ನು ಬಂಗಾರಕ್ಕೆ ಹೋಲಿಸಿ ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬಂದ ಜಾಹೀರಾತು ವಿಶೇಷವಾಗಿತ್ತು.

ಇಷ್ಟಕ್ಕೇ ಮುಗಿಯದೇ ಖ್ಯಾತ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಅವರು ಗಗನಕ್ಕೇರುತ್ತಿರುವ ಈರುಳ್ಳಿಯ ಬೆಲೆಯನ್ನು ವಿಶ್ವದ ಪ್ರಸಿದ್ಧ ಓಟಗಾರ ಬೋಲ್ಟ್ ಗೆ ಹೋಲಿಸಿ ವಿಡಂಬಿಸಿದ್ದರೇ, ರಘುಪತಿ ಶೃಂಗೇರಿ ಎನ್ನುವವರು ಈರುಳ್ಳಿ ಮಾರುವವನಿಗೆ ಭದ್ರತೆ ನಿಯೋಜಿಸಿರುವ ಕಾರ್ಟೂನ್ ರಚಿಸಿ ವಿಡಂಬಿಸಿದ್ದಾರೆ.


* ಹೊಸ ಗಾದೆ ಮಾತು
* ದಾರಿಯಲ್ಲಿ ಸಿಕ್ಕ ಈರುಳ್ಳಿಯನ್ನು ಮಾಲೀಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ…
* ಹಣದ ಬದಲಾಗಿ ಈರುಳ್ಳಿಯನ್ನೇ ಪಣಕ್ಕಿಟ್ಟರು ಆಟ!
* ತೆಲುಗಿನನಲ್ಲಿ ಶ್ರೀಮಂತುಡು ಸಿನಿಮಾ ಬಿಡುಗಡೆಯಾಗಿ ದಾಖಲೆ ಮಾಡುತ್ತಿದ್ದರೆ ಇತ್ತ ಈರುಳ್ಳಿ ಚೀಲದ ಮೇಲೆ ಕುಳಿತ ಶ್ರೀಮಂತುಡು.
* ಸಿಮ್ ಕಾರ್ಡ್ ಪೋರ್ಟ್ ಮಾಡಿದರೆ ಕೆಜಿ ಈರುಳ್ಳಿ ಉಚಿತ!
* ಕೋಳಿ ಮೊಟ್ಟೆ ಹಾಕುವಾಗ ಈರುಳ್ಳಿಯನ್ನು ಹಾಕಿದರೆ ಆಮ್ಲೆಟ್ ಮಾಡಬಹುದು
* ಬಾಲಿವುಡ್ ಬಾದ್ ಷಾ ಮತ್ತು ಕನ್ನಡದ ಚಿಕ್ಕಣ್ಣನ ನಡುವೆ ನಡೆದ ಸಂಭಾಷಣೆ ಈರುಳ್ಳಿಬೆಲೆ ಏರಿಕೆಯನ್ನು ವಿಡಂಬನೆ ಮಾಡಿದ್ದು ಹೀಗೆ.
* ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಅದ್ದೂರಿ ವೆಚ್ಚದ ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ಶಿವಲಿಂಗದ ಬದಲಾಗಿ ಈರುಳ್ಳಿ ಹೊತ್ತಿರುವುದು
* ಪ್ರಿಯತಮೆಗೆ ಡೈಮಂಡ್ ಗಿಂತ ಹೆಚ್ಚಿನ ಬೆಲೆ ಬಾಳುವ ಈರುಳ್ಳಿ ಉಂಗುರ
* ‘ನನಗೆ ಅಹಂಕಾರದಿಂದ ಮಾತನಾಡಬೇಕು, ಅಥವಾ ನನ್ನ ದರ್ಪವನ್ನು ನಿಮ್ಮ ಎದುರಿಗೆ ತೋರಿಸಬೇಕು, ನನ್ನ ಶ್ರೀಮಂತಿಕೆ ನಿಮಗೆ ತೋರಿಸಬೇಕು ಎಂಬ ಬಯಕೆ ನನಗಿಲ್ಲ. ಆದರೂ ಹೇಳ್ತಾ ಇದೀನಿ,,, ನಮ್ಮ ಮನೆಯಲ್ಲಿ ಇಂದು ಈರುಳ್ಳಿ ಸಾಂಬಾರ್!’

ಈರುಳ್ಳಿ ಬೆಲೆ ಒಮ್ಮೆಲೆ ಏರಿಕೆಯಾದದ್ದು ಹೇಗೆ?
ದೇಶದಲ್ಲೇ ಮಹಾರಾಷ್ಟ್ರದಲ್ಲಿ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ಬೇರೆ ಬೇರೆ ರಾಜ್ಯಗಳಿಗೆ ಅಲ್ಲಿಂದ ರಫ್ತಾಗುತ್ತದೆ. ಆದರೆ ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಅಲ್ಲಿನ ಈರುಳ್ಳಿ ಬೆಳೆ ಸಾಕಷ್ಟು ಹಾಳಾಗಿತ್ತು. ನಮ್ಮ ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಸಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರುವುದರಿಂದ ಈ ಮಧ್ಯದ ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡಿತ್ತು.

ಈಗ ಇಳಿಕೆಯಾಗಿರುವುದು ಹೌದೇ?
ಒಂದೇ ಬಾರಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾದಿದ್ದರೂ ಒಂದೆರಡು ವಾರಗಳಲ್ಲಿ ದರ ಇಳಿಯಲಿದೆ ಎಂದು ಸಗಟು ವರ್ತಕರು ಹೇಳುತ್ತಾರೆ. ಈ ನಡುವೆ ಈರುಳ್ಳಿಯ ದರ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಕೆಜಿಗೆ 45 ರೂ. ಲೆಕ್ಕದಲ್ಲಿ ಒಂದು ಸಾವಿರ ಟನ್‌ ಈರುಳ್ಳಿಯನ್ನು ತಕ್ಷಣವೇ ಆಮದು ಮಾಡಿಕೊಳ್ಳುಲು ಟೆಂಡರ್ ಕರೆಯುವಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಂಎಂಟಿಸಿಗೆ ನಿರ್ದೇಶನ ನೀಡಿತ್ತು.

ಚಿತ್ರಕೃಪೆ: ಫೆಸ್ಬುಕ್, ವಾಟ್ಸಪ್, ಸಿಫ್ಪಿ.ಕಾಂ(ಸತೀಶ್ ಆಚಾರ್ಯ), ರಘುಪತಿ ಶೃಂಗೇರಿ
Exit mobile version