ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಅವರು ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗ ಮಂದಿರ, ಆರ್ಟ್ ಗ್ಯಾಲರಿ, ಗ್ರಂಥಾಲಯ, ಕಾರಂತ ಸಿರಿ ಪುಸ್ತಕ ಮಾರಾಟ ಮಳಿಗೆ ವೀಕ್ಷಿಸಿದರು.
ಥೀಮ್ ಪಾರ್ಕ್ ವ್ಯವಸ್ಥೆ ಬಗ್ಗೆ ಮೆಚ್ಚುಗೆ
ಕಾರಂತರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದ್ದು, ಈ ನಿಟ್ಟಿನಲ್ಲಿ ಕಾರಂತರ ಹೆಸರು ಅeರಾಮರವಾಗಿರಲು ಥೀಮ್ ಪಾರ್ಕ್ ಸಹಕಾರಿ. ಇಲ್ಲಿನ ಸ್ವಚ್ಚತೆ, ದಿನ ನಿತ್ಯ ನಡೆಯುವ ಕಾರ್ಯಕ್ರಮಗಳು, ಮಕ್ಕಳಿಗಾಗಿ ನಡೆಯುವ ತರಗತಿಗಳು ವ್ಯವಸ್ಥಿತವಾಗಿ ನಡೆಯುತ್ತಿರುವ ಸಂತಸದ ವಿಷಯ. ಗ್ರಾಮ ಪಂಚಾಯತ್ ಗ್ರಂಥಾಲಯವಾದರೂ ತುಂಬಾನೇ ಸುಂದರವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರ ಪ್ರಯೋಜನ ಹೆಚ್ಚಿನ ಜನ ಪಡೆಯುವಂತಾಗಬೇಕು, ಗ್ರಂಥಾಲಯದಲ್ಲಿರುವ ಕಾರಂತರ ಪೈಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ಜೊತೆ ಶಾಲಾ ಪಠ್ಯ ಪುಸ್ತಕದ ಗ್ರಂಥಾಲಯಕ್ಕೆ ನೀಡುವಂತೆ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದರು.
ರಸ್ತೆ ಸಮಸ್ಯೆ ಬಗ್ಗೆ ಚರ್ಚೆ
ಮುಖ್ಯ ರಸ್ತೆಯಿಂದ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಥೀಮ್ ಪಾರ್ಕ್ ಸಂಧಿಸುವ ರಸ್ತೆ ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದರ ಅಗಲೀಕರಣದ ಬಗ್ಗೆ ಚರ್ಚೆ ನಡೆಸಿದರು. ಕಾರಂತ ಥೀಮ್ ಪಾರ್ಕ್ ಅಭಿವೃದ್ಧಿ ಹೊಂದುತ್ತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವ್ಯವಸ್ಥಿತವಾದ ರಸ್ತೆಯ ಅವಶ್ಯವಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಅಗಲೀಕರಣ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿಡಿಓ ಶೈಲಾ ಎಸ್ ಪೂಜಾರಿ , ಸದಸ್ಯ ಸತೀಶ್ ಬಾರಿಕೆರೆ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಚ್.ಆರ್ ಇಬ್ರಾಹೀಂಪೂರ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ , ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಸಹಾಯಕ ಇಂಜಿನಿಯರ್ ಮೋಹನ್ ನಾಯ್ಕ, ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ ಕರಣಿಕ ಚೆಲುವರಾಜ್, ಕೋಟ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಪ್ರಭು, ಮುಂತಾದವರು ಉಪಸ್ಥಿತರಿದ್ದರು.