Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಥೀಮ್ ಪಾರ್ಕಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಭೇಟಿ

ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ ಇಲಾಖೆಯಿಂದ ವರ್ಷಪೂರ್ತಿ ಕಾರ್ಯಕ್ರಮ: ಸಚಿವ ವಿ. ಸುನಿಲ್ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ ಎಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಸೋಮವಾರ ಕೋಟ ಡಾ ಶಿವರಾಮ ಕಾರಂತ ಥೀಮ್ ಪಾರ್ಕ್ ಹಾಗೂ ಅಮೃತೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಥೀಮ್ ಪಾರ್ಕಿನಲ್ಲಿ ಮಾತನಾಡಿ ಶಿವರಾಮ ಕಾರಂತರದ್ದು ಚಲನಶೀಲ ವ್ಯಕ್ತಿತ್ವವಾಗಿದ್ದು, ಎಲ್ಲಾ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿದೆ. ಅದನ್ನು ಮುಂದುವರಿಸಲಾಗುವುದು ಎಂದರು. ಈ ಸಂದರ್ಭ ಡಾ. ಶಿವರಾಮ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹುದ್ದೆ ನೇಮಕಾತಿ ಆದೇಶ ರದ್ದುಗೊಳಿಸಿದ್ದ ಅಭ್ಯರ್ಥಿ ಸಂಕಷ್ಟಕ್ಕೆ ಸಿಲುಕುವಂತಾಗಿವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಶೀಘ್ರ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು, ಬೆಸ್ಕಾಂನಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಸುವ ಬಗ್ಗೆ ಪ್ರಸ್ತಾವನೆ ಇದೆ ಅದರ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.

ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಥೀಮ್ ಪಾರ್ಕ್ ವಿಶೇಷತೆಗಳ ಬಗ್ಗೆ ಮಾತನಾಡಿ ಮುಂದಿನ ಪೀಳಿಗೆಯೂ ಕೂಡ ಸಾಹಿತಿ, ಮಾನವತಾವಾದಿ ಶಿವರಾಮ ಕಾರಂತರ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂಬ ಆಸೆ ಹಾಗೂ ಆಶಯದೊಂದಿಗೆ ಥೀಮ್ ಪಾರ್ಕ್ ಮಾಡಲಾಗಿದೆ. ಅದನ್ನು ಇನ್ನಷ್ಟು ಉನ್ನತಿಕರಿಸುವ ಉದ್ದೇಶವಿದೆ ಎಂದರು.

ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ,ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಕಾರಂತ ಥೀಂ ಪಾರ್ಕ್ ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಹಾಗೂ ಬಿಜೆಪಿಯ ಪ್ರಮುಖರು ಜೊತೆಗಿದ್ದರು.

Exit mobile version