Site icon Kundapra.com ಕುಂದಾಪ್ರ ಡಾಟ್ ಕಾಂ

ಶೆ.100ರಷ್ಟು ಲಸಿಕೆ ಪಡೆದು ಮಾದರಿಯಾದ ಕಾವ್ರಾಡಿ ಗ್ರಾಮದ ಜನತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಗ್ರಾಮದಲ್ಲಿ ಶೆ.100ರಷ್ಟು ಜನತೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಕೋವಿಡ್ ನಿಯಂತ್ರಣದಲ್ಲಿ ಕಾವ್ರಾಡಿ ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರೂ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆಯುವಲ್ಲಿ 100% ಯಶಸ್ವಿಯಾಗಿದ್ದು, ಹಲವು ಮಂದಿ ಎರಡನೇ ಹಂತದ ಲಸಿಕೆಯನ್ನೂ ಸಹ ಪಡೆದಿದ್ದಾರೆ.

ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದಲ್ಲಿ 4032 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದು ಇವರೆಲ್ಲರೂ ಮೊದಲ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಈ ಮೊದಲೇ 100% ಸಾಧನೆ ಮಾಡಿದ್ದ ಇಲ್ಲಿ, 18 ವರ್ಷ ಮೇಲ್ಪಟ್ಟವವರು ತಾವೇ ಉತ್ಸಾಹದಿಂದ ಬಂದು ಲಸಿಕೆ ಪಡಿದಿದ್ದಾರೆ. ಲಸಿಕೆ ಪಡೆಯದೇ ದೂರ ಉಳಿದಿದ್ದವರನ್ನು ಗುರುತಿಸಿ, ವೈದ್ಯರ ತಂಡದೊಂದಿಗೆ ಅವರ ಮನೆಗಳಿಗೆ ತೆರಳಿ, ಕೋವಿಡ್ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಲಸಿಕೆ ನೀಡಲಾಗಿದೆ.

ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಲತಾ ನಾಯಕ್ ಮತ್ತು ಅವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಹಾಗೂ ಪಿಡಿಓ ಈ ಮಾದರಿ ಕಾರ್ಯದಲ್ಲಿ, ಪರಸ್ಪರ ಸಮನ್ವಯದಿಂದ ಯೋಜನೆ ರೂಪಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

ಜಿಲ್ಲೆಯ ಜನಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಒಟ್ಟು 10,02,762 ಮಂದಿಯನ್ನು ಗುರುತಿಸಿದ್ದು, ಆಗಸ್ಟ್ 31 ರ ವರೆಗೆ 7,51,150 ಮಂದಿ ಲಸಿಕೆ ಪಡೆದಿದ್ದು 75% ಸಾಧನೆ ಆಗಿದೆ. ಇದೇ ಅವಧಿಯಲ್ಲಿ 2 ನೇ ಡೋಸ್ ಗೆ ಗುರುತಿಸಲಾಗಿರುವ 3,08,326 ಮಂದಿಯಲ್ಲಿ 2,81,820 ಮಂದಿ ಲಸಿಕೆ ಪಡೆದಿದ್ದು ಇದರಲ್ಲಿ 91% ಸಾಧನೆ ಮಾಡಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ.

Exit mobile version