Kundapra.com ಕುಂದಾಪ್ರ ಡಾಟ್ ಕಾಂ

ಭತ್ತಕ್ಕೆ ಕನಿಷ್ಠ ರೂ.2500 ಖರೀದಿ ಬೆಲೆ ನಿಗದಿಪಡಿಸಿ: ರೈತರಿಂದ ಪ್ರತಿಭಟನೆಯ ಎಚ್ಚರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ರೈತರು ಬೆಳೆದ ಭತ್ತಕ್ಕೆ ಕನಿಷ್ಠ ರೂ.2500/ ಖರೀದಿ ಬೆಲೆಯನ್ನು ನ.5ರೊಳಗೆ ಸರಕಾರ ಘೋಷಿಸಬೇಕು. ಘೋಷಿಸದೇ ಇದ್ದಲ್ಲಿ ನ.6ರಂದು ರೈತರು ಪ್ರತಿಭಟನೆ ಕೈಗೊಳ್ಳಾಗುತ್ತದೆ ಎಂದು ಬ್ರಹ್ಮಾವರ ರೈತ ಹೋರಾಟ ಸಮಿತಿ ಎಚ್ಚರಿಸಿದೆ. ಅವರು ಇಲ್ಲಿನ ಮದರ್ ಪ್ಯಾಲೇಸ್‌ನಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರೈತ ಹೋರಾಟ ಸಮಿತಿ ಈ ಹಿಂದೆಯೇ ಸರಕಾರವನ್ನು ಮಾದ್ಯಮಗಳ ಮೂಲಕ ಎಚ್ಚರಿಸಿದರೂ ರೈತರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಕೇರಳದಲ್ಲಿ ಭತ್ತದ ಕ್ವಿಂಟಾಲ್‌ಗೆ ರೂ. 2740೦ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕೇವಲ ರೂ. 1700 ನೀಡುತ್ತಿದ್ದಾರೆ. ಇಲ್ಲಿ ತಾನು ಬೆಳೆದ ಭತ್ತಕ್ಕೆ ರೈತ ಬೆಲೆ ನಿಗದಿಪಡಿಸುತ್ತಿಲ್ಲ. ಬದಲಾಗಿ ರೈಸ್‌ಮಿಲ್ ಮಾಲಕರೇ ಬೆಲೆ ನಿಗದಿಪಡಿಸುತ್ತಿದ್ದಾರೆ. ರೈತ ತಾನು ಬೆಳೆದ ಭತ್ತವನ್ನು ಕೆಜಿಯೊಂದಕ್ಕೆ 17ರೂಗೆ ನೀಡಿ ಅಕ್ಕಿಯನ್ನು ರೂ.32ಕ್ಕೆ ಖರೀದಿಸುತ್ತಿದ್ದಾನೆ. ಎಲ್ಲೆಡೆ ಕಟಾವು ಮುಗಿಯುತ್ತಾ ಬಂದಿದೆ. ರೈತ ರೈಸ್‌ಮಿಲ್ಲಿಗೆ ಭತ್ತ ತಲುಪಿಸುವ ಮೊದಲೇ ಸರಕಾರ ಬೆಲೆ ನಿಗದಿಪಡಿಸಬೇಕಿತ್ತು. ಬೆಲೆ ನಿಗದಿ ಮಾಡದೆ ಸರಕಾರವೇ ರೈತರನ್ನು ಶೋಷಣೆ ಮಾಡುತ್ತಿದೆ. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ. 2500/- ಕನಿಷ್ಟ ಖರೀದಿ ಬೆಲೆ ನಿಗದಿಗೊಳಿಸಬೇಕು. ಗ್ರಾಮ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳ ಸ್ಥಾಪಿಸಬೇಕು. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕೃಷಿ ನೀತಿ ಅಳವಡಿಸಬೇಕು. ಕೃಷಿಇಲಾಖೆ/ಎಪಿಎಂಸಿ ರೈತಸ್ನೇಹಿಯಾಗಿರುವಂತೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರಬೇಕು. ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಶೀಘ್ರ ಬಿಡುಗಡೆ ಮಾಡಬೇಕು. ಕಟಾವು ಯಂತ್ರಗಳ ಬಾಡಿಗೆ ದರ ನಿಯಂತ್ರಣ ಮಾಡಬೇಕು. ಜಿಲ್ಲೆಯಲ್ಲಿ ವಾಣಿಜ್ಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಜಿಲ್ಲೆಯ ವ್ಯವಸಾಯಿಕ/ ಸಹಕಾರಿ ಬ್ಯಾಂಕ್‌ಗಳು ಲೇವಾದಾವಿ ಹೊರತಾದ ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವುಗಳೊಂದಿಗೆ ಸರಕಾರ ಸಮನ್ವಯ ನಡೆಸಬೇಕು. ರೈತರ ಘನತೆಯನ್ನು ಸರ್ಕಾರ ಗೌರವಿಸಬೇಕು. ಪದೇ ಪದೇ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸುವ ಸಂದರ್ಭ ಸೃಷ್ಟಿಸಬಾರದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಯ ರೈತರು ಭಾಗವಹಿಸುವಂತೆ ಮನವಿ :
ಶನಿವಾರ ಬ್ರಹ್ಮಾವರದಲ್ಲಿ ಬೆಳಿಗ್ಗೆ 10.00ಕ್ಕೆ ನಡೆಯುವ ರೈತರ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಿಂದ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೋರಾಟ ಸಮಿತಿ ವಿನಂತಿಸಿದೆ.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಭರತ್ ಶೆಟ್ಟಿ ಗಿಳಿಯಾರು, ರವೀಂದ್ರ ಐತಾಳ ಕೋಟ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ರಮೇಶ್‌ರಾವ್ ಪಾಂಡೇಶ್ವರ, ಶಿವಮೂರ್ತಿ ಉಪಾಧ್ಯಾಯ ಮಣೂರು, ಭಾಸ್ಕರ ಶೆಟ್ಟಿ ಮಣೂರು, ಜಯರಾಮ ಶೆಟ್ಟಿ ಮಣೂರು, ಅಲ್ವಿನ್ ಅಂದ್ರಾದೆ ಪಾಂಡೇಶ್ವರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ವಿನಯಕುಮಾರ್ ಕಬ್ಯಾಡಿ, ಉಮನಾಥ ಶೆಟ್ಟಿ ಬೆಳೂರು, ಕಿಸಾನ್ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಇನ್ನಿತರರು ಉಪಸ್ಥಿತರಿದ್ದರು.

ಪತ್ರಕರ್ತ ವಸಂತ್ ಗಿಳಿಯಾರ್ ಪ್ರಾಸ್ತವಿಕ ಮಾತುಗಳನ್ನಾಡಿದ್ದು ಉದಯಕುಮಾರ್ ಶೆಟ್ಟಿ ವಂದಿಸಿದರು.

Exit mobile version