ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗಮಕ ಎಂಬುದು ಅತೀ ಪ್ರಾಚೀನ ಕಲೆ. ಕವಿ ರಚಿತ ಕಾವ್ಯಗಳ ಸಾಹಿತ್ಯದ ಅರ್ಥ ಕೆಡದಂತೆ, ಪದ ವಿಂಗಡನೆ ಮಾಡಿ, ರಾಗ-ಭಾವ, ಪದ-ಭಾವ ಸಮನ್ವಯಗೊಳಿಸಿ ಸಂಗೀತದ ವಿವಿಧ ರಾಗಗಳನ್ನು ಅಳವಡಿಸಿ ಹಾಡುವ ಕ್ರಮವೇ ಗಮಕ ಕಲೆ. ಕವಿ, ಗಮಕಿ, ವಾದಿ, ವಾಗ್ಮಿ ಇವರುಗಳು ಸಾಹಿತ್ಯ ಚತರ್ಮುಖರೆಂದೆ ಪ್ರತೀತಿ. ಕವಿಗೆ ಮೊದಲ ಸ್ಥಾನವಾದರೆ, ಗಮಕಿಗೆ ಎರಡನೆ ಸ್ಥಾನ. ರಸ ಭಾವಗಳಿಗೆ ಅನುಗುಣವಾಗಿ ರಾಗಗಳು ಸೇರಿದರೆ ಸಾಹಿತ್ಯದ ಮೌಲ್ಯ ಹೆಚ್ಚುತ್ತದೆ, ಹೃದಯಕ್ಕೆ ಹತ್ತಿರವಾಗುತ್ತದೆ. ಗಮಕ ಕಲೆ ಉಳಿದು ಬೆಳೆಯುವುದಕ್ಕೆ ಶಾಲಾ ಕಾಲೇಜುಗಳಲ್ಲಿ ಗಮಕ ಕಲೆಯ ಅಧ್ಯಯನ ಯಶಸ್ಸಿನ ಮೆಟ್ಟಿಲು ಎಂದು ಹಾಸನ ಜಿಲ್ಲೆಯ ಗಮಕಕಲಾ ಪರಿಷತ್ತಿನ ಅಧ್ಯಕ್ಷ ಕರ್ನಾಟಕ ಕಲಾಶ್ರೀ ಗಣೇಶ ಉಡುಪ ಹೇಳಿದರು.
ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢ ಶಾಲೆಯಲ್ಲಿ ಕುಂದಾಪುರ ಗಮಕ ಕಲಾ ಪರಿಷತ್ತು೬೬ ನೇ ರಾಜ್ಯೋತ್ಸವ ಹಾಗೂ ಸ್ವಾಂತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪಠ್ಯಾಧಾರಿತ ಗಮಕವಾಚನ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಡುಪರು ಮಾತನಾಡಿದರು.
ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ರಾಘವೇಂದ್ರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ, ಜನಪದರ ನಡುವೆ ಹುಟ್ಟಿ ಬೆಳೆದ ಕಲೆ ಸಂಸ್ಕೃತಿಯನ್ನು ಬಾಲ್ಯದಲ್ಲಿಯೇ ಅರಿತು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯಿದೆ, ಇಂತಹ ಕ್ರಿಯಾತ್ಮಕ ಚಟುವಟಿಕೆಗಳಿಗೆ ಶಾಲಾ ಸಮಿತಿಯ ಸಹಕಾರ ಸದಾಇರುತ್ತದೆ ಎಂದು ಶುಭ ಹಾರೈಸಿದರು.
ಕನಾಟಕ ಪಬ್ಲಿಕ್ ಸ್ಕೂಲ್‌ನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಿಘ್ನೇಶ್ವರ ಭಟ್ ಅಧ್ಯಕ್ಷತೆವಹಿಸಿದ್ದರು. ಕುಂದಾಪುರ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಗಮಕಿ ಸುಜಯಿಂದ್ರ ಹಂದೆ ಎಚ್. ಕಾರ್ಯಕ್ರಮದ ಉದ್ದೇಶದ ಕುರಿತಂತೆ ಮಾತನಾಡಿ ಶುಭ ಹಾರೈಸಿದರು.
ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಸುಜಾತ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಶಿಕ್ಷಕಿ ಭಗವತಿ ವಂದಿಸಿದರು. ಇಂಗ್ಲಿಷ್ ಅಧ್ಯಾಪಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
೮, ೯, ೧೦ ನೇ ತರಗತಿಗಳ ಕನ್ನಡ ಪಠ್ಯ ಭಾಗದ ಹಳೆಗನ್ನಡ, ನಡುಗನ್ನಡಗಳ ಕಾವ್ಯ ಭಾಗಗಳ ಗಮಕವಾಚನ ನಡೆಯಿತು. ಯಾವ ರಸಗಳಿಗೆ ಯಾವ ರಾಗಗಳನ್ನು ಹೊಂದಿಸಬೇಕೆಂದು ಪ್ರಸಿದ್ಧ ಭಾವಗೀತೆ, ಭಕ್ತಿ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರಗೀತೆಗಳ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನಡೆಯಿತು. ಮಧ್ಯಾಹ್ನ ಕಾಳಾವರ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮದ ಸಮಾರೋಪ ನೆರವೇರಿತು.

