Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಖಾಲಿ

ಬೈಂದೂರು ವಲಯ 35 ಶಾಲೆ. ಕುಂದಾಪುರ ವಲಯ 8 ಶಾಲೆ

ಕುಂದಾಪುರ: ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಬೊಬ್ಬೆ ಹೊಡೆಯುವವರು ಹೊಡೆಯುತ್ತಲೇ ಇರುತ್ತಾರೆ. ಆದರೆ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂದು ಸುಮ್ಮನಿರುತ್ತಾರೆ. ಅಧಿಕಾರಿಗಳ ಇಂತಹ ಜಡ ಧೋರಣೆ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ.

ಬೈಂದೂರು ಹಾಗೂ ಕುಂದಾಪುರ ವಲಯದ 41 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಸರಿಸುಮಾರು ಕಳೆದ ಶೈಕ್ಷಣಿಕ ವರ್ಷದಿಂದಲೇ ಖಾಲಿ ಬಿದ್ದಿದ್ದರೂ ಅವುಗಳನ್ನು ಭರ್ತಿಗೊಳಿಸುವ ಕೆಲಸ ಮಾತ್ರ ಈವರೆಗೆ ನಡೆದಿಲ್ಲ ಎಂಬುದು ಶಿಕ್ಷಣ ಇಲಾಖೆಯ ಆಮೆ ನಡಿಗೆಯನ್ನು ಸಾಕ್ಷೀಕರಿಸುವಂತಿದೆ.

ಬೈಂದೂರು ವಲಯದ 35 ಶಾಲೆಗಳ ಪೈಕಿ 28 ಶಾಲೆಗಳಿಲ್ಲಿ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದ್ದು, 7 ಶಾಲೆಗಳ ಪೂರ್ಣಕಾಲಿಕಾ ಮುಖ್ಯ ಶಿಕ್ಷಕರ ಹುದ್ದೆಗೆ ಮಂಜೂರಾತಿ ಕೋರಿ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಕುಂದಾಪುರ ವಲಯಲ್ಲಿ 8 ಮುಖ್ಯ ಶಿಕ್ಷಕ ಹುದ್ದೆಯ ಪೈಕಿ 6 ಪೂರ್ಣಕಾಲಿಕ ಹಾಗೂ 2 ಪದವೀಧರ ಹುದ್ದೆಗಳು ಖಾಲಿ ಇದೆ.

ಪ್ರಮೋಷನ್ ಬೇಡವೆನ್ನುವ ಶಿಕ್ಷಕರು!
ಮುಖ್ಯಶಿಕ್ಷಕರ ಹುದ್ದೆಯ ಭರ್ತಿಗೊಳಿಸಲು ಮೂರು ತಿಂಗಳ ಹಿಂದೆ ನಡೆದ ಕೌನ್ಸಿಲಿಂಗ್‌ನಲ್ಲಿ ಹಿರಿಯ ಶಿಕ್ಷಕರುಗಳು ಪ್ರಮೋಷನ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಪ್ರಮೋಷನ್ ತೆಗೆದುಕೊಂಡು ಉಡುಪಿ ಜಿಲ್ಲೆಯ ಒಂದು ಬದಿಯಿಂದ (ಬ್ರಹ್ಮಾವರದ ಆಚೆಗಿನವರು) ಬೈಂದೂರು ಭಾಗಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಸೇವೆಯಲ್ಲಿ ಹಿರಿಯರಾದವರು, ಈಗಾಗಲೇ ಮುಖ್ಯ ಶಿಕ್ಷಕ ಹುದ್ದೆಯಲ್ಲಿರುವವರು ಪ್ರಮೋಷನ್ ತೆಗೆದುಕೊಳ್ಳದೇ ಇರುವುದರಿಂದ ಇಷ್ಟೊಂದು ಹುದ್ದೆಗಳು ಖಾಲಿ ಬಿದ್ದಿದೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ, ಹೊರ ಜಿಲ್ಲೆಗಳ ಶಿಕ್ಷಕರಿಗೆ ಭಡ್ತಿ ನೀಡಿ ಈ ಭಾಗಕ್ಕೆ ವರ್ಗಾವಣೆ ನೀಡುವುದೇ ಪರಿಹಾರ ಎನ್ನಲಾಗಿದೆ.

ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸಮಸ್ಯೆ ಪ್ರತಿಧ್ವನಿ:
ಹಲವು ತಿಂಗಳುಗಳಿಂದ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಬಿದ್ದಿರುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ ಕಳವಳ ವ್ಯಕ್ತಪಡಿಸಿದ್ದರು. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಲು ಒಂದು ವಾರದೊಳಗೆ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಹುದ್ದೆಗಳು ಮಾತ್ರ ಇನ್ನೂ ಖಾಲಿ ಇದೆ.

[quote bgcolor=”#ffffff”]  ಶಿಕ್ಷಣದ ಗುಣಮಟ್ಟ ಕಡಿಮೆಯಾಗಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಇಷ್ಟು ದಿನಗಳಿಂದ ಹುದ್ದೆಯನ್ನು ಭರ್ತಿಮಾಡಲು ಯಾಕೆ ಕ್ರಮಕೈಗೊಳ್ಳಲಿಲ್ಲ. ಆಡಳಿತ ವ್ಯವಸ್ಥೆಯೇ ಹಳ್ಳಹಿಡಿದರೆ ಶಿಕ್ಷಣ ವ್ಯವಸ್ಥೆ ಸರಿದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಆಧಿಕಾರಿಗಳ ಮಟ್ಟದಲ್ಲೇ ಆಗಬಹುದಾದ ಕೆಲಸಗಳು ಹೀಗೆ ಬಾಕಿ ಉಳಿಸುತ್ತಾ ಹೋದರೆ ಹೇಗಾದಿತು? ಕೂಡಲೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಡಿಡಿಪಿಐ ಕೈಗೊಳ್ಳಬೇಕು.

– ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ [/quote]

[quote bgcolor=”#ffffff”] ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇರುವುದು ನನ್ನ ಗಮನದಲ್ಲಿದೆ. ಮೂರು ತಿಂಗಳ ಹಿಂದೆ ಹುದ್ದೆಯನ್ನು ಭರ್ತಿಗೊಳಿಸಲು ಕೌನ್ಸಿಲಿಂಗ್ ನಡೆಸಿದಾಗ ಹಿರಿಯ ಶಿಕ್ಷಕರು ಪ್ರಮೋಷನ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಶಿಕ್ಷಕರೇ ಕೌನ್ಸಿಲಿಂಗ್ ನಡೆಸಬೇಡಿ ಎಂದು ಒತ್ತಡ ತರುತ್ತಿದ್ದಾರೆ. ಇದರೊಂದಿಗೆ ತಾಂತ್ರಿಕ ತೊಂದರೆಗಳು ಇರುವುದರಿಂದ ಕೂಡಲೇ ಭರ್ತಿ ಮಾಡಲು ಸಾಧ್ಯವಿಲ್ಲ. ಬೈಂದೂರು ವಲಯದ ಮಾವಿನಕಟ್ಟೆ ಸೇರಿದಂತೆ ೭ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಸರಕಾರದಿಂದ ಹುದ್ದೆಗೆ ಮಂಜೂರಾತಿ ಕೋರಲಾಗಿದೆ.

– ಎಚ್. ದಿವಾಕರ್ ಶೆಟ್ಟಿ, ಡಿಡಿಪಿಐ, ಉಡುಪಿ [/quote]

Exit mobile version