ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಅರಿವು ಮೂಡಿಸಲು ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ಹಮ್ಮಿಕೊಂಡ ಆರೋಗ್ಯಕ್ಕಾಗಿ ಓಟ
ಕುಂದಾಪುರ: ವಿಶ್ವ ಹೃದಯ ದಿನದ ಅಂಗವಾಗಿ, ಆರೋಗ್ಯದ ಬಗೆಗೆ ಜನಜಾಗೃತಿ ಮೂಡಿಸಲು ಇಂದು(ಸೆ.27) ರೋಟರಿ ಕ್ಲಬ್ ಕುಂದಾಪುರ ಹಾಗೂ ನ್ಯೂ ಮೆಡಿಕಲ್ ಸೆಂಟರ್ ಜಂಟಿಯಾಗಿ ಹಮ್ಮಿಕೊಂಡ ’ಆರೋಗ್ಯಕ್ಕಾಗಿ ಓಟ-2015’ ಭಾರಿ ಜನಮನ್ನಣೆ ಗಳಿಸಿತು.
ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಓಟ ಸ್ವರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ 150ಕ್ಕೂ ಹೆಚ್ಚು ಸ್ವರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಬೆಳ್ಳಿಗೆ ೮ಗಂಟೆಗೆ ಕುಂದಾಪುರದ ಗಾಂಧಿಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಬಲೂನ್ ಹಾರಿಸಿ, ಬಾವುಟದ ನಿಶಾನೆ ತೋರುವ ಮೂಲಕ ಓಟಕ್ಕೆ ಚಾಲನೆ ನೀಡಿದರು.
ಗಾಂಧಿಮೈದಾನದಿಂದ ಹೊರಟ ಸ್ವರ್ಧಾಳುಗಳು ಶಾಸ್ತ್ರಿ ಪಾರ್ಕ್, ಪಾರಿಜಾತ ಸರ್ಕಲ್ ಮೂಲಕ ಹೊಸ ಬಸ್ ನಿಲ್ದಾಣವನ್ನು ತಲುಪಿ ಅಲ್ಲಿಂದ ಪುರಸಭೆ ರಸ್ತೆಯನ್ನು ದಾಟಿ ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆಯ ಮೂಲಕ ಮತ್ತೆ ಗಾಂಧಿ ಮೈದಾನವನ್ನು ತಲುಪಿದರು. ಒಟ್ಟು 3.2ಕಿ.ಮೀ ದೂರವನ್ನು 11ನಿಮಿಷಗಳಲ್ಲಿ ಕ್ರಮಿಸಿದ ನಿಟ್ಟೆ ವಿದ್ಯಾಸಂಸ್ಥೆಯ ಚಿದಾನಂದ ಪ್ರಥಮ ಸ್ಥಾನ ಪಡೆದರೇ, ಗುರುಕುಲ ಕಾಲೇಜಿನ ಮಂಜುನಾಥ್ ದ್ವಿತೀಯ ಸ್ಥಾನವನ್ನು, ಮಣಿಪಾಲ ಪಿಯು ಕಾಲೇಜಿನ ಸಂಗಮೇಶ್ ತೃತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಅಂಬಿಕಾ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದರೇ, ಸವಿತಾ ದ್ವಿತೀಯ ಸ್ಥಾನವನ್ನು ಭಾರ್ಗವಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಾಲ್ಕನೇ ಹಾಗೂ ಐದನೇ ಸ್ಥಾನವನ್ನು ಪಡೆದವರಿಗೂ ಸ್ಥಳದಲ್ಲಿಯೇ ನಗದು ಬಹುಮಾನ ಘೋಷಿಸಲಾಯಿತು.
[quote bgcolor=”#ffffff”]ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಹೊಸ ಬಸ್ ನಿಲ್ದಾಣದ ತನಕ ಓಡಿದರೇ, ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಮರಳಿ ಗಾಂಧಿಮೈದಾನಕ್ಕೆ ಬರುವ ಮೂಲಕ ಓಟವನ್ನು ಪೂರ್ಣಗೊಳಿಸದ್ದರು. 60 ವರ್ಷ ಮೇಲ್ಪಟ್ಟ ಮಹಿಳೆಯೋರ್ವರು ಓಟವನ್ನು ಪೂರ್ಣಗೊಳಿಸಿದ್ದು, ಪೊಲೀಸ್ ಸಿಬ್ಬಂಧಿಗಳೂ ಹುರುಪಿನಿಂದ ಭಾಗವಹಿಸಿದ್ದರು ಕಾರ್ಯಕ್ರಮದ ವಿಶೇಷವಾಗಿತ್ತು.[/quote]
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ನಾಗರಾಜ ಕಾಮಧೇನು, ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎ.ಬಿ. ಶೆಟ್ಟಿ, ರೋಟರಿ ವಲಯ-೧ರ ಅಸಿಸ್ಟಂಟ್ ರೋಟರಿ ಗವರ್ನರ್ ಸತೀಶ್ ಎನ್. ಶೇರೆಗಾರ್, ನ್ಯೂ ಮೆಡಿಕಲ್ ಸೆಂಟರ್‌ನ ನಿರ್ದೇಶಕರುಗಳಾದ ಡಾ. ರಂಜನ್ ಶೆಟ್ಟಿ, ದಿನಕರ್ ಶೆಟ್ಟಿ, ಕಿಯೋನಿಕ್ಸ್ ಯುವ.ಕಾಂ ನ ಧೀರಜ್ ಹೆಜಮಾಡಿ, ಕಾರ್ಯಕ್ರಮ ಸಂಯೋಜಕ ಎಚ್. ಎಸ್. ಹತ್ವಾರ್ ಉಪಸ್ಥಿತರಿದ್ದರು.
ರೋಟರಿ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕೋಣಿ ಧನ್ಯವಾದಗೈದರು. ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.