Kundapra.com ಕುಂದಾಪ್ರ ಡಾಟ್ ಕಾಂ

ಆಟೋರಿಕ್ಷಾ ನಿಲುಗಡೆಗೆ ಜಾಗ ಕಲ್ಪಿಸುವಂತೆ ಆಗ್ರಹಿಸಿ ಕುಂದಾಪುರ ಪುರಸಭೆಗೆ ಮುತ್ತಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಪುರಸಭೆಯಲ್ಲಿ ಆಟೋರಿಕ್ಷಾ ಸ್ಟ್ಯಾಂಡ್ ಒದಗಿಸುವಂತೆ ಕಳೆದ ನಲವತ್ತು ವರ್ಷದಿಂದ ನೂರರಷ್ಟು ಮನವಿ ಸಲ್ಲಿಸಿದ್ದರೂ ಆಟೋಚಾಲಕರ ಬವಣೆ ನೀಗಿಲ್ಲ. ಆಟೋರಿಕ್ಷಾ ಎಲ್ಲರಿಗೂ ಬೇಕು. ಚಾಲಕರ ಸಮಸ್ಯೆ ಯಾರಿಗೂ ಬೇಡ. ರಸ್ತೆ ವಿಸ್ತರಣೆ ಕಟ್ಟಡಗಳ ನಿರ್ಮಾಣಕ್ಕೆ ಆಟೋಚಾಲಕರು ನೆಲೆಯಿಲ್ಲದೆ ಪರದಾಡುತ್ತಿದ್ದು, ಪುರಸಭೆ ಅಟೋಚಾಲಕರ ಸಮಸ್ಯೆ ಸ್ಪಂದಿಸದೆ ಅವರ ತುತ್ತಿನ ತಟ್ಟೆ ಕಸಿದುಕೊಳ್ಳುತ್ತದೆ ಎಂದು ಆಟೋ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಮನ್ವಯ ಸಮತಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಆರೋಪಿಸಿದ್ದಾರೆ.

ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘಟನೆಗಳ ಸಮನ್ವಯ ಸಮಿತಿ ಆಶ್ರಯದಲ್ಲಿ ಕುಂದಾಪುರ ಪುರಸಭೆ ಎದುರು ಮಂಗಳವಾರ ನಡೆದ ಪ್ರತಿಯಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಮಾತನಾಡಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಸ್ವೀಕರಿಸಿ, ಆಟೋರಿಕ್ಷಾ ಚಾಲಕರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದು, ಹಿಂದೆಯೂ ಕೂಡಾ ಪುರಸಭೆ ಆಟೋಚಾಲಕರ ಸಮಸ್ಯೆ ಬಗ್ಗೆ ಸ್ಪಂದಿಸಿದ್ದು, ಬೇಡಿಕೆ ಬಗ್ಗೆ ಸಂಘಟನೆ ಮುಖಂಡರು ಹಾಗೂ ಚಾಲಕರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪುರಸಭೆ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಭರವಸೆ ನೀಡಿದರು.

ಸಮನ್ವಯ ಸಮಿತಿ ಮುಖಂಡ ಶಂಕರ ಅಂಕದಕಟ್ಟೆ ಮಾತನಾಡಿ, ಪುರಸಭೆ ತಕ್ಷಣ ಗೂಡ್ಸ್ ಹಾಗೂ ಆಟೋರಿಕ್ಷಾ ಸ್ಟ್ಯಾಂಡ್ ಜಾಗ ಗುರುತಿಸಿ ಪ್ರಕಟಣೆ ಹೊರಡಿಸಬೇಕು. ಗ್ರಾಮೀಣ ಭಾಗದಲ್ಲೂ ಆಟೋರಿಕ್ಷಾ ಸ್ಟ್ಯಾಂಡ್ ಇದೆ. ಆದರೆ ಕುಂದಾಪುರ ನಗರದಲ್ಲಿ ನೆಲೆ ಇಲ್ಲದಿರುವುದು ನೋವಿನ ವಿಷಯ. ಆಟೋರಿಕ್ಷಾ ಸ್ಟ್ಯಾಂಡ್ ಸಮಸ್ಯೆ ಪರಿಹಾರ ಮಾಡದಿದ್ದರೆ ಮುಂದೆ ದೊಡ್ಡಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಕುಂದಾಪುರ: ಚಿಕ್ಕಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಪ್ರಕರಣ: ಆರೋಪಿಗೆ 20 ವರ್ಷ ಜೈಲು – https://kundapraa.com/?p=58639 .

ಸಂಘಟನೆ ಪ್ರಮುಖರಾದ ಚಂದ್ರಶೇಖರ್ ರಾಜ ಮಠದಬೆಟ್ಟು, ಸುರೇಶ ಪುತ್ರನ್, ಸಿಐಟಿ ರಮೇಶ್ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬೆಳಗ್ಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ನೂರಾರು ಆಟೋಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಹೊಸ ಬಸ್‌ನಿಲ್ದಾಣದ ಮೂಲಕ ಪುರಸಭೆ ಮುಂದೆ ಜಮಾಯಿಸಿ, ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಬಂದ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮತ್ತು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮನವಿ ಸ್ವೀಕರಿಸಿದರು. ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ನಾಮನಿರ್ದೇಶಕ ಸದಸ್ಯ ರತ್ನಾಕರ ಶೇರೆಗಾರ್ ಇದ್ದರು. ಕುಂದಾಪುರ ಠಾಣೆ ಎಎಸ್ಸೈ ಸುಧಾಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Exit mobile version