ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಸರಕಾರ, ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಅಂಬೇಡ್ಕರ್ ಕಾರ್ಮಿಕ ಹಸ್ತ ಯೋಜನೆಯಡಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ರೋಟರಿ ಕ್ಲಬ್ ಬೈಂದೂರು ಹಾಗೂ ಸಿಐಟಿಯು ಬೈಂದೂರು ತಾಲೂಕು ಇವರ ಸಹಯೋಗದಲ್ಲಿ ಶನಿವಾರ ಬೈಂದೂರು ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಬೈಂದೂರು ಆಟೋರಿಕ್ಷಾ ಮತ್ತು ವಾಹನ ಚಾಲಕರಿಗೆ ಅಪಘಾತ ಜೀವ ರಕ್ಷಕ ಯೋಜನೆಯಡಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಸಮಾರಂಭವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್. ಜಯಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಆಟೋರಿಕ್ಷಾ ಮತ್ತು ಖಾಸಗಿ ವಾಣಿಜ್ಯ ವಾಹನ ಚಾಲಕರು ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಮಂಡಳಿಯು ಜಾರಿಗೊಳಿಸುತ್ತಿರುವ ಅಪಘಾತ ಪರಿಹಾರದ ವಿವಿಧ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಪ್ರಯತ್ನ ಮಾಡಬೇಕು. ರಸ್ತೆ ಸಂಚಾರದಲ್ಲಿ ವಾಹನ ಅಪಘಾತವಾದ ಸಂದರ್ಭ ಆಟೋರಿಕ್ಷಾ ಮತ್ತು ವಾಹನ ಚಾಲಕರು ತುರ್ತು ನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಜೀವಹಾನಿಯಾಗುವುದನ್ನು ತಪ್ಪಿಸುವ ಮಹತ್ತರ ಸಮಾಜ ಸೇವೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ ಇವರು ಅಧ್ಯಕ್ಷೀಯ ಭಾಷಣದಲ್ಲಿ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯು ಚಾಲನಾ ಪರವಾನಿಗೆ ಪಡೆದ ೨೦ ರಿಂದ ೭೦ ವರ್ಷಗಳ ವಯೋಮಿತಿಯ ಖಾಸಗಿ ಅಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ಸ್ ವಾಹನ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ. ಯೋಜನೆಯಡಿ ಫಲಾನುಭವಿಯು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಸರಕಾರವೇ ಪೂರ್ಣವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ ಎಂದು ಹೇಳಿದರು. ಅಪಘಾತದಿಂದ ಚಾಲಕನು ಪ್ರಾಣಾಪಯಕ್ಕೆ ತುತ್ತಾದಾಗ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಅಂಗಾಂಗಗಳು ಹಾನಿಗೊಳಗಾದಾಗ, ಚಾಲಕರು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ ಅಥವಾ ಶಾಶ್ವತ/ತಾತ್ಕಾಲಿಕ ದುರ್ಬಲತೆ ಹೊಂದಿದಾಗ ಯೋಜನೆಯ ಸೌಲಭ್ಯ ಲಭ್ಯವಾಗುತ್ತದೆ. ವಿಮಾ ಮೊತ್ತ ಗರಿಷ್ಟ ರೂಪಾಯಿ ೨ ಲಕ್ಷಗಳ ವರೆಗೆ ಲಭ್ಯವಾಗುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಚಾಲಕ ಬಂಧುಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಥಮ ಚಿಕಿತ್ಸೆ ಜಿಲ್ಲಾ ತರಬೇತುದಾರರಾದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮತ್ತು ಡಾ. ಕೀರ್ತಿ ಪಾಲನ್ ಸಂಪನ್ಮೂಲ ವ್ಯಕ್ತಿಗಳಾಗಿ ಚಾಲಕರಿಗೆ ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷತೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಭಟ್ ಉಪ್ಪುಂದ, ಕಾರ್ಯದರ್ಶಿ ಮಂಜುನಾಥ ಮಹಾಲೆ, ಕಾರ್ಮಿಕ ಸಂಘಗಳ ಒಕ್ಕೂಟ ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ, ರಾಜೀವ ಪಡುಕೋಣೆ, ಗಣೇಶ ತೊಂಡೆಮಕ್ಕಿ, ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ಡಿ. ಎಸ್. ಸತ್ಯನಾರಾಯಣ, ಉಡುಪಿ ವೃತ್ತ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಪ್ರವೀಣ ಕುಮಾರ್ ವೇದಿಕೆಯಲ್ಲಿದ್ದರು.
ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ಮುಖಂಡರಾದ ಮಂಜುನಾಥ ಪಡುವರಿ, ಸಂತೋಷನಾಯ್ಕನಕಟ್ಟೆ, ಅಮ್ಮಯ್ಯ ಪೂಜಾರಿ ಬಿಜೂರು,ನಾಗರತ್ನ ನಾಡ, ಜಟ್ಟ ಪೂಜಾರಿ ಯಡ್ತರೆ, ವಿಜಯ ಕೋಯಾನಗರ, ಸರಸ್ವತಿ, ಕಾರ್ಮಿಕ ಇಲಾಖೆಯ ಶಿವಪ್ರಸಾದ್, ಸ್ಟೇನಿ ಸಹನಾ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು. ಗೋಪಾಲ ಪಡುವರಿ ಸ್ವಾಗತ ಗೀತೆ ಹಾಡಿದರು ಕೋಣಿ ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು















