ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಜಿಲ್ಲೆಯ ಮಾರಿಕಾಂಬಾ ದೇಗುಲಗಳಲ್ಲಿನ ಮಾರಿ ಜಾತ್ರೆಯಲ್ಲಿ ಕಂಡುಬರದ ಮನೆ ಮನೆಗೆ ಕೋಣ ಮೆರವಣಿಗೆ ಸಂಪ್ರದಾಯವೊಂದು ನೂರಾರು ವರ್ಷಗಳಿಂದ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತದೆ.
ತಾಲೂಕಿನ ಹಕ್ಲಾಡಿ ಗ್ರಾಮದ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನ ಜಾತ್ರೆಯ ಪೂರ್ವದಲ್ಲಿ ಮನೆ ಬಾಗಿಲಿಗೆ ಬರುವ ಕೋಣಕ್ಕೆ ಮುತ್ತೈದೆಯರು ಕಾಲು ತೊಳೆದು, ಹಣೆಗೆ ಅರಿಶಿನ ಕುಂಕುಮವಿಟ್ಟು, ನೆತ್ತಿಗೆ ಎಣ್ಣೆ ಹಾಕಿ ಭಕ್ತಿಯಿಂದ ಕಾಲಿಗೆರೆಗೆ ಮಾರಿಕಾಂಬಾ ಕಾಪಾಡಮ್ಮಾ ಎಂದು ಬೇಡಿಕೊಳ್ಳುತ್ತಾರೆ. ಕೋಣ ಮನೆ ಬಾಗಿಲಿಗೆ ಬಂದರೆ ಶುಭ, ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ನೂರಾರು ವರ್ಷಗಳಿಂದ ಕೋಣನ ಮನೆ ಮೆರವಣಿಗೆ ನಡೆಯುತ್ತಿದೆ.
ಕೋಣ ಬರುವ ಮನೆಗಳ ಅಂಗಳ ಶುದ್ದಮಾಡಿ, ತಳಿರು ತೋರಣ ಕಟ್ಟಿ, ರಂಗೋಲಿಯಿಟ್ಟು ಊರವರು ಭವ್ಯ ಸ್ವಾಗತ ನೀಡುತ್ತಾರೆ. ಮನೆ ಬಾಗಿಲಿಗೆ ಬಂದ ಕೋಣದ ಕಾಲು ತೊಳೆದು, ಕಾಲು ಹಾಗೂ ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಚ್ಚಿ, ತಿನ್ನಲು ಅಕ್ಕಿ ನೀಡಲಾಗುತ್ತದೆ. ಇದರಲ್ಲಿ ವಾಡಿಕೆ ಮನೆಗಳಿದ್ದು, ಆ ಮನೆಗಳಿಗೆ ಖುದ್ದು ಕೋಣ ಕರೆದೊಯ್ಯಲಾಗುತ್ತದೆ. ಕೆಳಾಕಳಿ ಇಡೀ ಜಾತ್ರೆಯ ವೈಶಿಷ್ಟ್ಯ ಆಕರ್ಷಣೆ ಕೋಣ ಮೆರವಣಿಗೆ. ಡೋಲು, ಕೊಳಲು ಸಾಂಪ್ರದಾಯಕ ವಾದ್ಯಗಳ ಕೋಣ ಜಾತ್ರೆಗೆ ಕಳೆಕಟ್ಟುತ್ತದೆ. ಕೋಣ ಮನೆ ಮನೆಗೆ ಬರುವುದರಿಂದ ಮನೆಯ ಕಷ್ಟ, ನಷ್ಟ ಪರಿಹರಿಸಿ ಸುಖಶಾಂತಿ ನೆಲಸುವಂತೆ ಆಗುತ್ತದೆ ಎನ್ನೋದು ಭಕ್ತರ ನಂಬಿಕೆ. ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗಲಾಗದವರು, ಭಕ್ತರು ಕೆಳಾಕಳಿ ಮಾರಿಕಾಂಬಾ ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತಾರೆ. ಜಾತ್ರೆಗೆ ಕರಾವಳಿ ಜಿಲ್ಲೆಯಲ್ಲದೇ ಶಿರಸಿ, ಸಾಗರ, ನಗರ, ಹೊಸನಗರ ಪ್ರದೇಶದಿಂದಲೂ ಭಕ್ತರು ಬರುತ್ತಾರೆ. ಜಾತ್ರೆಗಾಗಿ ಕೋಣ ವಿಕ್ರಯಿಸಿ, ಶಿರಸಿ ಮಾರಿಕಾಂಬಾದೇವಿ ಪ್ರಸಾದ ಹಾಕುವ ಮೂಲಕ ದೇವಸ್ಥಾನಕ್ಕೆ ತಂದು ಕೋಣನಿಗಾಗಿ ಪ್ರತ್ಯೇಕ ಹಟ್ಟಿ ಮಾಡಲಾಗುತ್ತದೆ. ನಂತರ ಒಂದು ವಾರ ಹತ್ತೂರನ್ನು ಕೋಣ ಸುತ್ತಿ ಬರುತ್ತದೆ.
ಶಿರಸಿ ಮಾರಿಕಾಂಬಾ ಅಕ್ಕ ಕೆಳಾಕಳಿ ದೇವಿ ತಂಗಿ:
ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಶತಶತಮಾಗಳ ಇತಿಹಾಸಿವಿದೆ. ಶಿರಸಿ ಮಾರಿಕಾಂಬಾ ದೇವಿ ಅಕ್ಕನಾದರೆ, ಕಳಾಕಳಿ ದೇವಿ ತಂಗಿ ಎನ್ನೋದು ಭಕ್ತರ ನಂಬಿಕೆ. ಶಿರಸಿ ಜಾತ್ರೆಯಲ್ಲಿ ಏನೆಲ್ಲಾ ನಡೆಯುತ್ತದೋ ಅದರ ತದ್ರೂಪ ಕೆಳಾಕಳಿ ಮಾರಿ ಜಾತ್ರೆ. ಕೆಳಾಕಳಿ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತ್ರೆ ಸಮಯದಲ್ಲಿ ಮಾತ್ರ ಹರಕೆ ಸಂದಾಯಕ್ಕೆ ಅವಕಾಶ. ಜಾತ್ರೆ ಸಮಯದಲ್ಲಿ ಹೊರ ಗದ್ದುಗೆಯಲ್ಲಿ ಮಾರಿಕಾಂಬೆ ದೇವಿ ಕೂರಿಸಿ, ಎಲ್ಲಾ ವರ್ಗದ ಜನರಿಗೂ ಪೂಜೆ ಮಾಡುವ ಅವಕಾಶ ನೀಡುವುದು ವಿಶೇಷವಾಗಿದೆ.