Kundapra.com ಕುಂದಾಪ್ರ ಡಾಟ್ ಕಾಂ

ಗಣ್ಯರಿಂದ ಎ.ಜಿ. ಕೊಡ್ಗಿಯವರ ಅಂತಿಮ ದರ್ಶನ, ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.13:
ಸೋಮವಾರ ದೈವಾಧೀನರಾದ ಮಾಜಿ ಶಾಸಕ ಎ.ಜಿ ಕೊಡ್ಗಿಯವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಅಮಾಸೆಬೈಲುವಿನ ಗೋಕುಲ್ ಇಂಡಸ್ಟ್ರೀಸ್ ವಠಾರದಲ್ಲಿ ಇರಿಸಲಾಗಿದ್ದು, ಮಂಗಳವಾರ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಗೃಹ ಸಚಿವ ಅರಗ ಜ್ಞಾನೆಂದ್ರ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಹರೀಶ್ ಪೂಂಜಾ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಸಹಿತ ಅನೇಕ ಗಣ್ಯರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದ್ದರು.

ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:
ಸಕಲ ಸರಕಾರಿ ಗೌರವದೊಂದಿಗೆ ಕೋವಿಡ್ ನಿಯಮ ಪಾಲಿಸಿಕೊಂಡು ಎ.ಜಿ. ಕೊಡ್ಗಿ ಅವರ ಅಂತ್ಯಕ್ರಿಯೆ ನಡೆಸುವಂತೆ ಸರಕಾರ ಆದೇಶಿಸಿದ್ದು, ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಮಾಜಿ ಶಾಸಕ, ಆಧುನಿಕ ಅಮಾಸೆಬೈಲುವಿನ ನಿರ್ಮಾತೃ ಎ.ಜಿ. ಕೊಡ್ಗಿ ನಿಧನ – https://kundapraa.com/?p=59835 .

ಎ.ಜಿ. ಕೊಡ್ಗಿಯವರು ರಾಜಕೀಯವು ಸೇವೆ ಎಂಬ ಅರ್ಥಕ್ಕೆ ಶಕ್ತಿ ತುಂಬಿದ ಧೀಮಂತ ನಾಯಕರಾಗಿದ್ದರು. ಕೊನೆಯುಸಿರಿನ ತನಕವೂ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದು, ಅವರು ಸರಳತೆ ಶಿಸ್ತಿನಿಂದಲೇ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಕುಗ್ರಾಮವಾದ ಅಮಾಸೆಬೈಲ್ ಅನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಅವರಿಗಿದೆ. – ಬಿ. ವೈ. ರಾಘವೇಂದ್ರ, ಸಂಸದ

ಆಸ್ಕರ್, ವಿಎಸ್ ಆಚಾರ್ಯರಂತೆಯೇ ಎಜಿ ಕೊಡ್ಗಿಯವರದ್ದು ವಿಶೇಷವಾದ ವ್ಯಕ್ತಿತ್ವವಾಗಿದ್ದು ಎಜಿ ಕೊಡ್ಗಿಯವರು ಅನೇಕ ವಿಚಾರಧಾರೆಗಳನ್ನು ಬಿಟ್ಟು ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ನುಡಿದಂತೆ ನಡೆದುಕೊಂಡಿದ್ದರು. ಜನಸಾಮಾನ್ಯರ ಬಗ್ಗೆ ಅತೀವ ಕಾಳಜಿ ಅವರಲ್ಲಿತ್ತು. ಜೀವನದೂದ್ದಕ್ಕೂ ಅನೇಕ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. – ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ

5 ವರ್ಷಗಳ ಹಿಂದೆ ಎ.ಜಿ. ಕೊಡ್ಗಿ ಅವರೊಂದಿಗೆ ‘ಕುಂದಾಪ್ರ ಡಾಟ್ ಕಾಂ’ ನಡೆಸಿದ ಸಂದರ್ಶನ ಆಧುನಿಕ ಅಮಾಸೆಬೈಲುವಿನ ನಿರ್ಮಾತೃ ಎ.ಜಿ. ಕೊಡ್ಗಿ https://kundapraa.com/?p=3243 .

Exit mobile version