ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಜಿ ಶಾಸಕ, ಮೂರನೇ ಹಣಕಾಸು ಆಯೋಗದ ಅಧ್ಯಕ್ಷ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (93) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಗಳ ವೈಫಲ್ಯಕ್ಕೆ ಒಳಗಾಗಿದ್ದರು.
5 ವರ್ಷಗಳ ಹಿಂದೆ ಎ.ಜಿ. ಕೊಡ್ಗಿ ಅವರೊಂದಿಗೆ ‘ಕುಂದಾಪ್ರ ಡಾಟ್ ಕಾಂ’ ನಡೆಸಿದ ಸಂದರ್ಶನ ► ಆಧುನಿಕ ಅಮಾಸೆಬೈಲುವಿನ ನಿರ್ಮಾತೃ ಎ.ಜಿ. ಕೊಡ್ಗಿ – https://kundapraa.com/?p=3243 .
ಕರಾವಳಿ ಜಿಲ್ಲೆಯ ರಾಜಕಾರಣದಲ್ಲಿ ಅಪರೂಪದ ರಾಜಕೀಯ ಚಾಣಾಕ್ಷನಾಗಿ ತೊಡಗಿಸಿಕೊಂಡು, ತಾನು ಗುರುತಿಸಿಕೊಂಡ ಪಕ್ಷದಲ್ಲಿ ನಿಷ್ಠೆ ಹಾಗೂ ಬದ್ಧತೆಯನ್ನು ತೋರಿಸಿ, ಪಕ್ಷಕ್ಕೆ ತನ್ನ ಅವಶ್ಯಕತೆಯಿಲ್ಲ ಎಂದೆನಿಸಿದಾಗ ರಾಜಕೀಯದಿಂದಲೇ ನಿವೃತ್ತಿ ಪಡೆದ ಅಪರೂಪದ ಮುತ್ಸದ್ದಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ. ಕೊಡ್ಗಿ). ಅವರು ರಾಜಕೀಯದಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಕೃಷಿ, ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದವರು. 93ರ ವಯಸ್ಸಿನಲ್ಲಿಯೂ ಯುವರನ್ನೂ ನಾಚಿಸುವಂತಹ ಉತ್ಸಹ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಮನ್ನುಗ್ಗುತ್ತಿರುವ ಅವರು ಇದೀಗ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ತನ್ನೂರಿನ ಸರ್ವತೋಮುಖ ಅಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಶ್ರಮಿಸಿದರು.
ಕುಂದಾಪುರ ತಾಲೂಕು ಅಮಾಸೆಬೈಲು ಕೃಷಿಕ ಕುಟುಂಬದಲ್ಲಿ ಸ್ವಾತಂತ್ರ್ಯಹೋರಾಟಗಾರ ಕೃಷ್ಣರಾಯ ಕೊಡ್ಗಿ ಅವರ ಮಗನಾಗಿ 1929ರ ಅಕ್ಟೋಬರ್ 1 ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಕಾನೂನು ಪದವಿ ಪಡೆದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಿಸಿದರು. ಬಳಿಕ ಕೃಷಿಯಲ್ಲಿಯೇ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡವರು.
ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೊಡ್ಗಿ ಅವರು ಎಂಟು ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972-83ರ ತನಕ ಬೈಂದೂರು ಶಾಸಕ, 2006-08ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಎಪಿಎಂಪಿ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕ್ಯಾಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1982-1990ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ
ಎ.ಜಿ.ಕೊಡ್ಗಿ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಬೈಂದೂರು ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಬಳಿಕ ಕಾಂಗ್ರೆಸ್ ಭದ್ರಕೋಟೆ ಭೇದಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿಯೂ ಕೊಡ್ಗಿಯವರಿಗೆ ಸಲ್ಲುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿರುವಾಗ ಜಿಲ್ಲಾ ಕಾಂಗ್ರೆಸ್ ಸದಸ್ಯ, ರಾಜ್ಯ ಕಾಂಗ್ರೆಸ್ ಸದಸ್ಯರಾಗಿ ದುಡಿದವರು. 1993ರಲ್ಲಿ ಬಿಜೆಪಿಗೆ ಬಂದ ಕೊಡ್ಗಿ ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2006 ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, 2009ರಲ್ಲಿ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜಕೀಯ ನಿವೃತ್ತಿ ಪಡೆದು ಅಮಾಸೆಬೈಲಿನ ಅಭಿವೃದ್ಧಿಗಾಗಿ ಪಣತೊಟ್ಟು ನಿಂತರು.
ಎ.ಜಿ. ಕೊಡ್ಗಿ ಅವರು ಮಡದಿ ಸುನಂದಾ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕೊಡ್ಗಿ, ರೈತಸಂಘ ಅಧ್ಯಕ್ಷ ಅಶೋಕ್ ಕೊಡ್ಗಿ ಸೇರಿ ಐದು ಗಂಡು, ಒಬ್ಬಳು ಮಗಳು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.