Kundapra.com ಕುಂದಾಪ್ರ ಡಾಟ್ ಕಾಂ

ಕಾರಂತ ಥೀಂ ಪಾರ್ಕ್: ಹುಟ್ಟೂರಿನಲ್ಲಿ ಕಾರಂತಜ್ಜನ ನೆನಪು ಸದಾ ಹಸಿರು

ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತದ ಹುಟ್ಟೂರಲ್ಲಿ ಅವರ ನೆನಪಿಗಾಗಿ ನಿರ್ಮಾಣಗೊಂಡಿರುವ ಸ್ಮಾರಕ ಭವನ ನಿಜಾರ್ಥದಲ್ಲಿ ಸಾರ್ಥಕ್ಯವನ್ನು ಕಾಣುತ್ತಿದೆ. ಪ್ರತಿ ವಾರವೂ ಭವನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಸುವ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಾರಂತ ಭವವೀಗ (ಕಾರಂತ ಥೀಂ ಪಾರ್ಕ) ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಇದರೊಂದಿಗೆ ಅಕ್ಟೋಬರ್ 1ರಿಂದ ಅಕ್ಟೋಬರ್ 10ರ ವರೆಗೆ ನಡೆಯುತ್ತಿರುವ ವಿವಿಧ ವಿಚಾರಗಳ ‘ಚಿತ್ತಾರ’ ಭವನದ ನಿರ್ಮಾಣದ ಆಶಯಕ್ಕೆ ರೆಕ್ಕೆ ನೀಡಿದೆ.

[quote bgcolor=”#ffffff” arrow=”yes” align=”right”]ಅಕ್ಟೋಬರ್ 1ರಿಂದ 10ರ ವರೆಗೆ ಕಾರಂತ ಥೀಂ ಪಾರ್ಕನಲ್ಲಿ ಚಿತ್ತಾರ ಮಾತಿನಾಚೆಯ ಗುರುತು ಕಾರ್ಯಕ್ರಮ ನಡೆಯುತ್ತಲಿದೆ. ಖ್ಯಾತ ರಂಗಕರ್ಮಿ ಛಾಯಾಗ್ರಾಹಕ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಸದಾನಂದ ಸುವರ್ಣ ಅವರಿಗೆ ಅಕ್ಟೋಬರ್ 10ರಂದು ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಟೂನ್ ಹಬ್ಬ ಮತ್ತ ಸಾಂಸ್ಕೃತಿಕ ಸುಗ್ಗಿ 10 ದಿನಗಳ ಕಾಲವೂ ನಡೆಯಲಿದೆ.[/quote]

2011ರಲ್ಲಿ ಕೋಟ ಶಿವರಾಮ ಕಾರಂತ ಕಲಾಭವನವನ್ನು ಕಾರಂತರು ಹುಟ್ಟಿ, ನಲಿದಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳ್ಕೆರೆಯಲ್ಲಿ ನಿರ್ಮಿಸಲಾಗಿದೆ. ಕಾರಂತರಿಗೆ ಹುಟ್ಟೂರಿನಲ್ಲಿಯೇ ಅವಿಸ್ಮರಣೀಯ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಿಗಳ ಹಾರೈಕೆ ಮತ್ತು ಡಾ.ಶಿವರಾಮ ಕಾರಂತರ ಅಪ್ಪಟ ಅಭಿಮಾನಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮ ಇಲ್ಲಿ ಕಾರ್ಯರೂಪಕ್ಕಿಳಿದದ್ದು ಇತಿಹಾಸ.

ಇತ್ತೀಚೆಗಷ್ಟೆ ಕಾರಂತ ಥೀಂ ಪಾರ್ಕ್‌ನಲ್ಲಿ ನೂತನವಾಗಿ ಅಳವಡಿಸಲಾಧ ಕಲ್ಲಿನ ಉಯ್ಯಾಲೆ, ಕಲ್ಲಿನ ಕಾರಂಜಿ, ಕಲ್ಲು ಬೆಂಚುಗಳು ಮತ್ತು ಕಾರಂತರ ಫೈಬರ್ ಮೂರ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದ್ದಾರೆ. ಇದರೊಂದಿಗೆ ಕಾರಂತರ ಕೃತಿ ಮತ್ತು ಇಲ್ಲಿನ ಸಿರಿ ಸೊಬಗುಗಳು ಲಭ್ಯವಿರುವ ಕಾರಂತರ ಸಿರಿ ಉತ್ಪನ್ಯಗಳ ಮಳಿಗೆಯನ್ನು ಕೂಡ ನೂತನವಾಗಿ ಆರಂಭಿಸಲಾಗಿದೆ.

ಕಾರಂತರ ಹುಟ್ಟೂರಿನಲ್ಲಿ ಅವರ ನೆನಪನ್ನು ಹಸಿರಾಗಿಸಿರಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ‘ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ಪ್ರತಿವರ್ಷ ವಿಶೇಷ ಸಾಧಕರಿಗೆ ನೀಡುತ್ತಾ ಬರಲಾಗುತ್ತಿದೆ. ಈ ಪ್ರಶಸ್ತಿಯನ್ನು ನೀಡಲು ಆರಂಭಿಸಿ ಕಾರಂತರಿಗೆ ನಮನ ಸಲ್ಲಿಸುವುದರ ಜೊತೆಗೆ ಮುತುವರ್ಜಿಯಿಂದ ಈ ಕಲಾಭವನ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕೋಟತಟ್ಟು ಗ್ರಾಮಪಂಚಾಯಿತಿ ಕಾರಂತರನ್ನು ವಿಶೇಷವಾಗಿ ಸ್ಮರಿಸುತ್ತಿದೆ.

Exit mobile version