Kundapra.com ಕುಂದಾಪ್ರ ಡಾಟ್ ಕಾಂ

ಅಧಿಕ ಮಳೆಗೆ ಮೇಘಸ್ಪೋಟ ಕಾರಣ? ಬೈಂದೂರು ತಾಲೂಕಿನಲ್ಲಿ 5.5 ಕೋಟಿಗೂ ಮಿಕ್ಕಿ ಮಳೆ ಹಾನಿ ಅಂದಾಜು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.2:
ಬೈಂದೂರು ತಾಲೂಕಿನಲ್ಲಾದ ಭಾರಿ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಸೋಮವಾರ ಮಧ್ಯಾಹ್ನ ಆರಂಭಗೊಂಡ ವರುಣನ ಆರ್ಭಟ ರಾತ್ರಿವೇಳೆ ಹೆಚ್ಚಾಗಿದ್ದು ಬೈಂದೂರು ತಾಲೂಕಿನ ವಿವಿಧ ಭಾಗಗಳಲ್ಲಿ ನೆರೆ ಕಾಣಿಸಿಕೊಂಡಿತ್ತು.

ಅಧಿಕ ಮಳೆಗೆ ಮೇಘಸ್ಟೋಟ ಕಾರಣವಿರಬಹುದು ಎನ್ನಲಾಗಿದೆ. ಮರವಂತೆ, ಕೊಲ್ಲೂರು ತನಕವೂ ನಿರಂತರ ಮಳೆಯಾಗಿದ್ದರೆ, ಬೈಂದೂರು ಶಿರೂರು ಭಾಗದಲ್ಲಿ ಮೇಘಸ್ಟೋಟದ ಕಾರಣದಿಂದ ಹೆಚ್ಚಿನ ಮಳೆಯಾಗಿದೆ.

ಶಿರೂರು ಗ್ರಾಮದಲ್ಲಿ ಹೆಚ್ಚಿನ ಹಾನಿ:
ನಿರಂತರ ಮಳೆಯಿಂದಾಗಿ ಶಿರೂರು ಗ್ರಾಮದ ಕರಾವಳಿ ರಸ್ತೆ, ಕೆಳಪೇಟೆ ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಶಿರೂರು ಕರಾವಳಿ, ಹಡವಿನಕೋಣೆ, ಕೆಳಪೇಟೆ ಮೊದಲಾದೆಡೆಯ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 9 ಮನೆಗಳು ಸಂಪೂರ್ಣ ಕುಸಿದಿದೆ. ಶಿರೂರು ಕರಾವಳಿಯ 20ಕ್ಕೂ ಅಧಿಕ ದೋಣಿಗಳು ಸಮುದ್ರಪಾಲಾಗಿದೆ. 8ಕ್ಕೂ ಅಧಿಕ ಜಾನುವಾರುಗಳು, ಒಂದು ಬೈಕ್ ನೀರುಪಾಲಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಶಿರೂರು ಗ್ರಾಮವೊಂದರಲ್ಲೇ 5 ಕೋಟಿಗೂ ಅಧಿಕ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ:
ಬೆಳಿಗ್ಗೆ 3 ಗಂಟೆಯಿಂದಲೇ ಬೈಂದೂರು ಅಗ್ನಿಶಾಮಕದಳದ ಸಿಬ್ಬಂಧಿ, ಪೊಲೀಸರು, ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಯುವಕರು ಜೊತೆಸೇರಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ.

ಕಿತ್ತುಹೋದ ಹೆದ್ದಾರಿ:
ಮಳೆಯಿಂದಾಗಿ ಬೈಂದೂರು ಒತ್ತಿನಣೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸಂಪೂರ್ಣ ಕಿತ್ತುಹೊಗಿದೆ. ಅಲ್ಲಲ್ಲಿ ಕುಸಿತ ಉಂಟಾಗಿದೆ.

ಎಸಿ, ಮಾಜಿ ಶಾಸಕರ ಭೇಟಿ:
ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಬೈಂದೂರು ತಹಶಿಲ್ದಾರ್ ಕಿರಣ ಗೌರಯ್ಯ, ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಪಂ ಮಾಜಿ ಸದಸ್ಯ ಪುಪ್ಪರಾಜ ಶೆಟ್ಟಿ, ಶಿರೂರು ಪಂಚಾಯತ್ ಸದಸ್ಯರು ಮೊದಲಾದವರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:
ಭಾರಿ ಮಳೆಗೆ ತತ್ತರಿಸಿದ ಶಿರೂರು ಗ್ರಾಮ. ಬೈಂದೂರು ತಾಲೂಕಿನ ಹಲವೆಡೆ ಜಲಾವೃತ – https://kundapraa.com/?p=61097 .
► ಭಾರಿ ಮಳೆ: ಕುಂದಾಪುರ, ಬೈಂದೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು (ಅ.2) ರಜೆ – https://kundapraa.com/?p=61111 .

Exit mobile version