ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.2: ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತವಾಗಿದೆ.
ಶಿರೂರು ಗ್ರಾಮದ ಕೆಳಪೇಟೆ, ಕರಾವಳಿ ಭಾಗದಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಕೆಳಪೇಟೆಯ ಹೊಳೆ ತುಂಬಿ ಹರಿಯುತ್ತಿದ್ದು ಹತ್ತಿರದ ಮನೆಗಳಿಗೂ ನೀರು ನುಗ್ಗಿದೆ.
ತೇಲಿ ಹೋದ ದೋಣಿ, ಜಾನುವಾರು:
ಅನಿರೀಕ್ಷಿತ ನೆರೆಯಿಂದಾಗಿ ಜಾನುವಾರುಗಳು ನೀರಿನಲ್ಲಿ ತೇಲಿಹೋದ ಘಟನೆಯೂ ನಡೆದಿದೆ. ಕರಾವಳಿ ಭಾಗದಲ್ಲಿ ನಿಲ್ಲಿಸಲಾಗಿದ್ದ ದೋಣಿಗಳು ಸಮುದ್ರಪಾಲಾಗಿರುವ ಘಟನೆಯೂ ನಡೆದಿದೆ. ಮನೆಯ ಸಮೀಪ ನಿಲ್ಲಿಸಿದ್ದ ಕಾರೊಂದು ನೆರೆಯಿಂದಾಗಿ ಮುಳುಗಿಹೋಗಿದೆ.
ರಕ್ಷಣಾ ಕಾರ್ಯಚರಣೆ:
ಅಗ್ನಿಶಾಮಕ ದಳದ ಸಿಬ್ಬಂದಿಗಳು ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸ್ಥಳೀಯರು ನೆರವಾಗುತ್ತಿದ್ದಾರೆ. ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.
ಬೈಂದೂರು ಕೊಲ್ಲೂರು ರಸ್ತೆ ಸಂಚಾರ ಅಸ್ತವ್ಯಸ್ಥ:
ನಿರಂತರ ಮಳೆಯಿಂದಾಗಿ ಬೈಂದೂರು ಕೊಲ್ಲೂರು ರಸ್ತೆಯ ಮಯ್ಯಾಡಿ-ತಗ್ಗರ್ಸೆ ಭಾಗದ ನದಿಪಾತ್ರಗಳಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆಯ ಮೆಲೆಯೇ ರಭಸವಾಗಿ ನೀರು ಹರಿಯುತ್ತಿದೆ. ದೊಡ್ಡ ವಾಹನ ಹೊರತುಪಡಿಸಿ ಕಾರು, ರಿಕ್ಷಾ, ಬೈಕ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬೈಂದೂರು ತಾಲೂಕಿನ ವಿವಿಧೆಡೆ ಪ್ರವಾಹ:
ನಿರಂತರ ಮಳೆಯಿಂದಾಗಿ ಬೈಂದೂರು ತಾಲೂಕಿನ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು, ನದಿಯಂಚಿನ ಪ್ರದೇಶಗಳು ಜಲಾವೃತಗೊಂಡಿದೆ. ಮಳೆಯ ಆರ್ಭಟವೂ ಮುಂದುವರಿದ್ದು, ನೆರೆ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.