Kundapra.com ಕುಂದಾಪ್ರ ಡಾಟ್ ಕಾಂ

ಲೋಕಾಪುರದಲ್ಲಿ ಕಾಂತಾರ ಹವಾ. ಒಂದು ದಿನದ ಫ್ರೀ ಶೋ ಆಯೋಜಿಸಿದ ಉದ್ಯಮಿ ಗುಣಕರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸದ್ಯಕ್ಕಂತೂ ಸಿನಿಮಾ ಅಂದ್ರೆ ಕಾಂತಾರ ಎಂಬಂತಾಗಿದೆ. ಎರಡನೇ ವಾರದ ಅಂತ್ಯದ ವೇಳೆಗೆ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹೊಸ ಪ್ರೇಕ್ಷಕ ವರ್ಗವನ್ನೂ ಟಾಕೀಸುಗಳತ್ತ ಸೆಳೆಯುತ್ತಿದೆ. ಹಿಂದಿ ಹಾಗೂ ಇನ್ನಿತರ ಭಾಷೆಯಲ್ಲಿಯೂ ಬಿಡುಗಡೆಗೆ ತಯಾರಾಗಿ ಮುನ್ನಡೆಯುತ್ತಿದೆ.

ಕರಾವಳಿ ಸಂಸ್ಕೃತಿ, ಸಂಪ್ರದಾಯವನ್ನು ಬೆಳ್ಳಿತೆರೆಯ ಮೇಲೆ ತೋರಿಸುತ್ತಾ, ಅಭಿನಯ, ಸಂಗೀತ, ಮೇಕಿಂಗ್ ಎಲ್ಲದರ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಾ ಗೆದ್ದಿರುವ ಕಾಂತಾರ ಸಿನಿಮಾ, ಉತ್ತರ ಕರ್ನಾಟಕದಲ್ಲಿಯೂ ಸಖತ್ ಕ್ರೇಜ್ ಹುಟ್ಟುಹಾಕಿದೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಉದ್ಯಮಿ, ಹೋಟೆಲ್ ಶಾಂತಿ ಗ್ರ್ಯಾಂಡ್ ಮಾಲಿಕ ಗುಣಕರ ಶೇಖರ ಶೆಟ್ಟಿ ಅವರು ಗುರುವಾರ ಒಂದು ದಿನ ಲೋಕಾಪುರದ ಟಾಕೀಸ್ ಸಂಪೂರ್ಣ ಬುಕ್ ಮಾಡಿ ಅಲ್ಲಿನ ಜನತೆಗೆ ಕಾಂತಾರ ಸಿನಿಮಾ ಸಂಪೂರ್ಣ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.

ಕನ್ನಡದ ಸ್ಟಾರ್ ನಟರ ಸಿನಿಮಾಗಳಷ್ಟೇ ಓಡುತ್ತಿದ್ದ ಲೋಕಾಪುರದ ಟಾಕೀಸಿನಲ್ಲಿ ಕಾಂತಾರದ ಕ್ರೇಜ್ ಮಾತ್ರ ಜೋರಾಗಿಯೇ ಇದೆ. ಗುರುವಾರ ಆಯೋಜಿಸಲಾಗಿದ್ದ ಒಟ್ಟು 5 ಉಚಿತ ಪ್ರದರ್ಶನಗಳು ಹೌಸ್ ಪುಲ್ ಆಗಿದ್ದವು. ಟಾಕೀಸ್ ಕಡೆಗೆ ಯಾವತ್ತೂ ಮುಖಮಾಡದ ಲೋಕಾಪುರದ ಮಹಿಳೆಯರು ಕೂಡ ಥಿಯೇಟರಿನಲ್ಲಿ ಕಾದು ಸಿನಿಮಾ ವೀಕ್ಷಿಸಿದ್ದು ಮಾತ್ರ ವಿಶೇಷವಾಗಿತ್ತು.

ಉದ್ಯಮದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿರುವ ಗುಣಕರ ಶೆಟ್ಟಿ ಅವರು ಮೂಲತಃ ಕುಂದಾಪುರದ ತಾಲೂಕಿನ ನಂದ್ರೊಳ್ಳಿಯವರು. ಅವರ ಪತ್ನಿ ಪ್ರಿಯಾಂಕಾ ಗುಣಕರ ಶೆಟ್ಟಿ ಕೆರಾಡಿಯವರು. ತಮ್ಮೂರಿನ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಸಿನಿಮಾ, ತಮ್ಮೂರಿನಲ್ಲಿಯೇ ಚಿತ್ರೀಕರಣ ನಡೆದು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಬಗ್ಗೆ ದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾಗಿತಾವು ಸದ್ಯ ನೆಲೆಸಿರುವ ಲೋಕಾಪುರ ತಾಲೂಕಿನ ಜನರಿಗೂ ಸಿನಿಮಾ ತೋರಿಸಬೇಕೆಂಬ ನೆಲೆಯಲ್ಲಿ ಒಂದು ದಿನದ 5 ಶೋಗಳನ್ನು ಸಂಪೂರ್ಣ ಬುಕ್ ಮಾಡಿ ಜನರಿಗೆ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರ ಈ ಸಿನಿಮಾ ಪ್ರೀತಿಗೆ ಲೋಕಾಪುರದ ಜನರೂ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:
► ‘ಕಾಂತಾರ’ | ಕುಂದಾಪುರದಲ್ಲಿ ಒಂದು ಶೋ ಪೂರ್ತಿ ಬುಕ್ ಮಾಡಿದ ಉದ್ಯಮಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ – https://kundapraa.com/?p=62606 .

Exit mobile version