Kundapra.com ಕುಂದಾಪ್ರ ಡಾಟ್ ಕಾಂ

ಜೀರ್ಣೋದ್ಧಾರ ಕಾರ್ಯದಲ್ಲಿ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಕರಾವಳಿಯಿಂದ ಕೊಡಚಾದ್ರಿಯ ತಪ್ಪಲಿನ ತನಕದ ಪುಣ್ಯಭೂಮಿಯಲ್ಲಿ, ಆಸ್ತಿಕ ಬಂಧುಗಳ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ದೈವೀಶಕ್ತಿಗಳು ಅನೇಕಾನೇಕ. ಹೀಗೆ ಸಮೃದ್ಧ ಕೃಷಿ ಭೂಮಿಯ ಹಸಿರು ಹೊದಿಕೆ ನಡುವೆ ನೆಲೆನಿಂತು, ಭಕ್ತವರ್ಗವನ್ನು ಪೊರೆಯುತ್ತಿರುವ ಕಾರಣಿಕ ಸನ್ನಿಧಿಗಳಲ್ಲೊಂದು ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ.

ಸನಾತನ ಹಿಂದೂ ಸಂಸ್ಕೃತಿಯ ಪ್ರತಿಪಾದರಾದ ನಾಥಪಂಥದ ಪರಮಪೂಜ್ಯ ಗುರು ಶ್ರೀ ಮತ್ಸೇಂದ್ರನಾಥರು ಹಾಗೂ ಶ್ರೀ ಗೋರಕ್ಷನಾಥರ ಆಶೀರ್ವಾದದೊಂದಿಗೆ ನಾಥಪಂಥದ ಗುರುಗಳಿಂದಲೇ ಸುಮಾರು 800 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಸನ್ನಿಧಿಯೇ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹಾಗೂ ನಾಗೂರು ಪೇಟೆಯಿಂದ 1 ಕಿ.ಮೀ ದೂರದಲ್ಲಿ ಶ್ರೀ ಕಾಲಭೈರವನ ಸಾನಿಧ್ಯವಿದೆ.

ಶ್ರೀ ಕಾಲಭೈರವ ದೇವಸ್ಥಾನವು ದಕ್ಷಿಣ ಭಾರತದ ನಾಥ ಪಂಥದ ಮೂಲ ಮಠವಾದ ಕದ್ರಿ ಜೋಗಿ ಮಠ, ಯಡಮೊಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠಕ್ಕೆ ಸಂಬಂಧಿಸಿದ್ದಾಗಿದ್ದು, ಐತಿಹ್ಯವುಳ್ಳ ಕ್ಷೇತ್ರವಾಗಿದೆ. ಇಲ್ಲಿನ ಭೂನಾಗ ಸಾನಿಧ್ಯದಲ್ಲಿ ಅತ್ಯಂತ ವಿರಳ ಹಾಗೂ ಪ್ರಾಚಿನವೂ ಆದ ಚಿತ್ರಕೂಟ ಮತ್ತು ಶಿರಸಿ ಶ್ರೀ ಮಾರಿಕಾಂಬಾ ಹಾಗೂ ಭೂತರಾಯನ ಸಾನಿಧ್ಯವನ್ನೂ ಒಳಗೊಂಡಿದೆ.

ಪೌರಾಣಿಕ ಹಿನ್ನೆಲೆ:
ಸ್ಕಂದ ಪುರಾಣದಲ್ಲಿ ದಾಖಲಾದಂತೆ ಪರಮೇಶ್ವರನ ಕೋಪಾಗ್ನಿಯಿಂದ ಶ್ರೀ ಕಾಲಭೈರವ ಸ್ವಾಮಿಯ ಜನನವಾಯಿತೆಂದು ತಿಳಿದುಬಂದಿರುತ್ತದೆ. ಆದಿಯಲ್ಲಿ ಕಾಶಿ ಪುಣ್ಯಕ್ಷೇತ್ರದ ರಕ್ಷಣೆಗಾಗಿ ಅಷ್ಟದಿಕ್ಕುಗಳಲ್ಲಿ ಕಾಶಿ ಶ್ರೀ ವಿಶ್ವನಾಥನೇ, ಶ್ರೀ ಕಾಲಭೈರವ ದೇವರನ್ನು ನೇಮಿಸಿದ್ದನೆಂದು, ಹೀಗೆ ಶ್ರೀ ಕಾಲಭೈರವ ಸ್ವಾಮಿ ಭಕ್ತರನ್ನು ಪೊರೆಯುತ್ತಾ ನೆಲೆನಿಂತನೆಂದು ಪುರಾಣಗಳಿಂದ ತಿಳಿದು ಬರುತ್ತದೆ.

ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾರಾಷ್ಟ್ರದ ತ್ರಯಂಬಕೇಶ್ವರದಲ್ಲಿ ಜರುಗುವ ಪವಿತ್ರ ಪೂರ್ಣಕುಂಭ ಮೇಳದಿಂದ ಅನೇಕ ಸಾಧುಸಂತರು, ಯೋಗಿಗಳು, ಮಹಂತರನ್ನೊಳಗೊಂಡು ಹೊರಡುವ ಭಾರಪಂಥ್ ಝಂಡಿಯಾತ್ರೆಯು ದಕ್ಷಿಣದ ಶ್ರೀ ಕದ್ರಿ ಕ್ಷೇತ್ರಕ್ಕೆ ರಾಜ ಪಟ್ಟಾಭಿಷೇಕಕ್ಕಾಗಿ ಪಾತ್ರದೇವತೆಯನ್ನು ಹಿಡಿದು ಸಾಗಿ ಬರುತ್ತದೆ. ಹೀಗೆ ಸುಮಾರು 800 ವರ್ಷಗಳ ಹಿಂದೆ ಕದ್ರಿ ಕ್ಷೇತ್ರಕ್ಕೆ ಬಂದ ಯೋಗಿಗಳೇ, ಹಳಗೇರಿ ತೆಂಕಬೆಟ್ಟು ಎಂಬಲ್ಲಿ ಶ್ರೀ ಕಾಲಭೈರವ ದೇವಸ್ಥಾನವನ್ನು ಸ್ಥಾಪಿಸಿ, ನಾಥಪಂಥದ ಅನುಯಾಯಿಗಳಾದ ಜೋಗಿ ಸಮಾಜ ಭಾಂದವರಿಗೆ ಪೂಜಾ ದೀಕ್ಷೆ ನೀಡಿದರೆಂಬುದು ಐತಿಹ್ಯ. ಅಂದಿನಿಂದಲೂ ಹಳಗೇರಿ – ತೆಂಕಬೆಟ್ಟುವಿನಲ್ಲಿ ಭಕ್ತರ ಕಷ್ಟನಷ್ಟಗಳನ್ನು ದೂರಿಕರಿಸಿ, “ಓಂ ನಮಃ ಶ್ರೀ ಕಾಲಭೈರವಾಯ ನಮಃ” ಎಂದು ಭಜಿಸುವವರ ಇಷ್ಟಾರ್ಥಗಳನ್ನು ಅನುಗ್ರಹಿಸುವ ಪ್ರಭುವಾಗಿ ಕಾಲಭೈರವ ಸ್ವಾಮಿ ನೆಲೆನಿಂತಿದ್ದಾನೆ.

ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜಾ ಪುನಸ್ಕಾರಗಳು, ವರ್ಷಂಪ್ರತಿ ಶ್ರೀ ದೇವರ ಉತ್ಸವ ಮೂರ್ತಿಯ ಮೆರವಣಿಗೆ (ದೇವರು ಕಟ್ಟು) ಸೇವೆಯನ್ನು ಶ್ರೀ ಕ್ಷೇತ್ರದ ಸುತ್ತಮುತ್ತಲಿನ 8 ಊರುಗಳಿಗೆ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಜೋಗಿ ಕುಟುಂಬಸ್ಥರು ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ಸಂಕ್ರಾಂತಿ ಮತ್ತು ಅಮಾವಾಸ್ಯೆ ಪೂಜೆ, ಉಂಡಲಗಾಯಿ ಸೇವೆ ಹಾಗೂ ವಾರ್ಷಿಕೋತ್ಸವನ್ನು ಯಥಾವತ್ತಾಗಿ ನಡೆಸಲಾಗುತ್ತಿದೆ.

ಅಂತಿಮ ಹಂತದಲ್ಲಿ ಜೀರ್ಣೋದ್ಧಾರ ಕಾರ್ಯ:
ದೇವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ಅಷ್ಟಮಂಗಳ ಪ್ರಶ್ನೆಯಿಟ್ಟು, ಭಾದದೋಷಗಳಿಗೆ ತಂತ್ರಿವರೇಣ್ಯರ ಮಾರ್ಗದರ್ಶನದಂತೆ ಪ್ರಾಯಶ್ಚಿತಾದಿಗಳನ್ನು ನೆರವೇರಿಸಿ, ವಾಸ್ತು ತಜ್ಞರ ಸಲಹೆಯಂತೆ ಸಂಪೂರ್ಣ ಶಿಲಾಮಯ ತಾಮ್ರದ ಹೊದಿಕೆಯ ನೂತನ ದೇವಾಲಯವನ್ನು ನಿರ್ಮಿಸುವ ನಿರ್ಧಾರವನ್ನು ಜೀರ್ಣೋದ್ಧಾರ ಸಮಿತಿ ಕೈಗೊಂಡಿತು. ಖ್ಯಾತ ವಾಸ್ತುಶಿಲ್ಪಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ರೂ. 3 ಕೋಟಿ ವೆಚ್ಚದ ದೇವಸ್ಥಾನ ಪುನರ್ ನಿರ್ಮಾಣದ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿಕೊಟ್ಟರು. ಅದರಂತೆ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡು, ಕಾಮಗಾರಿ ಭರದಿಂದ ಸಾಗುತ್ತಿದೆ.

ಜನವರಿಯಲ್ಲಿ ನವೀಕೃತ ಶಿಲಾದೇಗುಲ ಲೋಕಾರ್ಪಣೆ:
2023ನೇ ಜನವರಿ 26ರಿಂದ ಮೊದಲ್ಗೊಂಡು ಜನವರಿ 30ರ ತನಕ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನಲ್ಲಿ ನವೀಕೃತ ಶಿಲಾದೇಗುಲ ಲೋಕಾರ್ಪಣೆ – ಪುನರ್ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವ – ಶ್ರೀ ನಾಗದೇವರಿಗೆ ಢಕ್ಕೆ ಮಂಡಲೋತ್ಸವ ಸಾಮೂಹಿಕ ಜೋಗಿ ದೀಕ್ಷಾ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ – ಧಾರ್ಮಿಕ, ಸಾಂಸ್ಕೃತಿಕ ವೈಭವೋತ್ಸವಗಳು ಗುರು ಹಿರಿಯರ ಮಾರ್ಗದರ್ಶನದಲ್ಲಿ, ಭಕ್ತಾಭಿಮಾನಿಗಳ ಸಹಕಾರದೊಂದಿಗೆ ನಡೆಸಲು ನಿಶ್ಚಯಿಸಲಾಗಿದೆ.

ತನು – ಮನ – ಧನ ಸಹಕಾರದ ಕೋರಿಕೆ:
ಸದ್ರಿ ದೇವಸ್ಥಾನಕ್ಕೆ ಮೂಲಸ್ವರೂಪದ ಆರ್ಥಿಕತೆ ಇಲ್ಲದಿರುವುದರಿಂದ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಭಕ್ತರ ತನು – ಮನ – ಧನ ಅಗತ್ಯವಿದೆ. ದೇಗುಲದ ಎಲ್ಲಾ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜೊತೆಗೆ ಆರ್ಥಿಕ ನೆರವನ್ನು ನೀಡಿ ದೇವರ ಕೃಪೆ ಪಾತ್ರವಾಗುವಂತೆ ಶ್ರೀ ಕಾಲಭೈರವ ಸೇವಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಕೋರಿಕೊಂಡಿದೆ.

ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಲು “ಜೀಣೋದ್ಧಾರ ಸಮಿತಿ, ಶ್ರೀ ಕಾಲಭೈರವ ದೇವಸ್ಥಾನ” ಹಳಗೇರಿ ತೆಂಕಬೆಟ್ಟು ಕಂಬದಕೋಣೆ – 576219 ಇದರ ಕೆನರಾ ಬ್ಯಾಂಕ್ ಹಣ ಸಂದಾಯ ಮಾಡಬಹುದಾಗಿದೆ.

ಕೆನರಾ ಬ್ಯಾಂಕ್ ನಾಗೂರು ಶಾಖೆ
ಖಾತೆ ನಂ 02902200017733
IFSC : CNRB0010290

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ : 9845618331, 7411117213, 9964380570

Exit mobile version