Kundapra.com ಕುಂದಾಪ್ರ ಡಾಟ್ ಕಾಂ

ಪುತ್ತೂರಿನ ಅನೀಶ್ ಭಟ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ರಂಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಡಾ. ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿ ಮನಸೆಳೆಯಿತು. ಪುತ್ತೂರಿನ ಅನೀಶ್ ವಿ. ಭಟ್ ಮತ್ತು ಬಳಗದ ಕಲಾವಿದರು ನೆರೆದಿದ್ದವರ ಮನಗೆದ್ದರು.

ಆದಿ ತಾಳದಲ್ಲಿ ನಳಿನಕಂಠಿವರ್ಣ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ಬಳಿಕ ’ಮಾರಿವೆರೆ ಷಣ್ಮುಖಪ್ರಿಯ’, ಶುದ್ಧ ಧನ್ಯಾಸಿ, ಸುಬ್ರಹ್ಮಣ್ಯೇನ ಹಾಡುಗಳು ಆದಿತಾಳದಲ್ಲಿ ಹೊರಹೊಮ್ಮಿದವು. ಶ್ರೀ ಕಾಂತೀಮತಿಮ್ ಪದ್ಯವು ಹೇಮಾವತಿರಾಗ, ಆದಿತಾಳದಲ್ಲಿ ಮೂಡಿಬಂದಿತ್ತು. ಕೊನೆಗೆ ಮಿಶ್ರಪೀಲು ರಾಗ ಮತ್ತು ಮಿಶ್ರಛಾಪು ತಾಳದಲ್ಲಿ ರಾಘವಂಕರುಣಾಕರಂ ಗೀತೆಯು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ವಿ ಭಟ್ ಶಾಸ್ತ್ರೀಯ ಸಂಗೀತದ ಸದ್ಯದ ಸ್ಥಾನಮಾನದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಈಗಿನ ದಿನಗಳಲ್ಲಿ ಉತ್ತರ ಭಾರತದ ಸಂಗೀತ ಪ್ರಕಾರಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಸಂಗೀತ ಪ್ರಕಾರಗಳಿಗೆ ಅದೇ ಬಗೆಯ ಆದ್ಯತೆ ಇಲ್ಲ. ಕರ್ನಾಟಕದಲ್ಲಿಯೂ ಕರ್ನಾಟಕ ಶಾಸ್ತೀಯ ಸಂಗೀತಕ್ಕೆ ಅವಕಾಶಗಳು ಕಡಿಮೆ. ತಮಿಳುನಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಿನ ಮಾನ್ಯತೆ ಇದೆ. ಆದರೆ ಕಲಿಯುವವರ ಸಂಖ್ಯೆ ಕಡಿಮೆ. ಹಾಗೇ ಕಲಿಸುವವರ ಸಂಖ್ಯೆಯೂಕಡಿಮೆ. ಕಲಿಯುವ ಆಸಕ್ತಿ ಇದ್ದವರು ಉತ್ತಮತರಬೇತಿ ಹಾಗೂ ನಿರಂತರವಾಗಿಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಅವಕಾಶಗಳು ದೊರಕುತ್ತವೆ ಎಂದು ತಿಳಿಸಿದರು.

ಅನೀಶ್ ವಿ.ಭಟ್‌ಜೊತೆಗೆ ವಿಶ್ವಜಿತ್ ಮತ್ತೂರು ವಯೋಲಿನ್‌ನಲ್ಲಿ ಹಾಗೂ ನಾಗೇಂದ್ರ ಪ್ರಸಾದ್ ಮೃದಂಗದಲ್ಲಿ ಸಾಥ್ ನೀಡಿದ್ದು ಪ್ರೇಕ್ಷಕರನ್ನು ಇನ್ನಷ್ಟು ಮನರಂಜಿಸಿತ್ತು. ಈ ಸ್ವರ ಮಾಂತ್ರಿಕತೆಗೆ ನೆರೆದಿದ್ದವರೆಲ್ಲಾ ಸತತ ಒಂದುವರೆ ಗಂಟೆಗಳ ಕಾಲ ತಲೆದೂಗುವಂತೆ ಮಾಡಿತ್ತು.

Exit mobile version