Kundapra.com ಕುಂದಾಪ್ರ ಡಾಟ್ ಕಾಂ

‘ದಾಸ ಸಿಂಚನ’ದಲ್ಲಿ ಭಕ್ತಿಭಾವ ಮಂಥನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
’ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹುದಲ್ಲ, ದಾಸನಾಗು ವಿಶೇಷನಾಗು’ ಎಂಬ ಅಂತರಂಗ ಶುದ್ಧಿಗೊಳಿಸುವ ಅರ್ಥಗರ್ಭಿತ ದಾಸರ ಸಾಲುಗಳು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಚ್ಚೊತ್ತಿದಂತಿತ್ತು. ಈ ಸಾಲುಗಳಿಗೆ ತಬಲ, ಕೀಬೋರ್ಡ್‌ನ ಸಾಥ್ ಸಿಕ್ಕರೆ ವಾಹ್… ಭಕ್ತಿಯ ಕಡಲಲ್ಲಿ ಮಿಂದೇಳಲು ಇನ್ನೇನು ಬೇಕು?

ಹೀಗೆ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವರು ಬೆಂಗಳೂರಿನ ಎಂ.ಎಸ್. ಗಿರಿಧರ್ ಮತ್ತು ಬಳಗದ ’ದಾಸ ಸಿಂಚನ’ ತಂಡ. ಮೂಡಬಿದ್ರೆಯ ಆಳ್ವಾಸ್ ಜಾಂಬೂರಿಯ ಕೃಷಿಸಿರಿ ವೇದಿಕೆ ಇಂತಹದೊಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

’ಮುಸುರೆ ತೊಳೆಯಬೇಕು ಮನಸಿನ ಮುಸುರೆ ತೊಳೆಯಬೇಕು’ ಎಂಬ ಪುರಂದರದಾಸರ ಕೀರ್ತನೆಯನ್ನು ರಾಗದೊಂದಿಗೆ ಅನುಭವಿಸುವುದೇ ಚೆಂದ. ಪ್ರೇಕ್ಷಕರು ಒಕ್ಕೊರಲಿನಿಂದ ಹಾಡುಗಾರರ ಭಕ್ತಿ ಸುಧೆಯಲ್ಲಿ ಮಿಂದು ’ರಾಮ ಕೃಷ್ಣ ಗೋವಿಂದ ನಾರಾಯಣ’ ಎಂದಾಗ ಭಗವಂತನೇ ಇಲ್ಲಿ ನೆಲೆಸಿ ಹಾಡಿಸುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು.

ತಳ ಹಿಡಿದ ಪಾತ್ರೆಗಳನ್ನು ಹಸಿರ ಹುಲ್ಲಿನಿಂದ ಸ್ವಚ್ಛಗೊಳಿಸುವಂತೆ ಮನಸಿನ ಕಲ್ಮಶಗಳನ್ನು ಕಿತ್ತೊಗೆಯಲು ದೇವರ ನಾಮ ಸ್ಮರಣೆಯೊಂದೇ ದಾರಿ ಎಂಬ ಅರ್ಥಗರ್ಭಿತ ಮಾತುಗಳನ್ನು ದಾಸ ಸಾಹಿತ್ಯದ ಗಾಯಕ ಗಿರಿಧರ್ ಅವರ ಬಾಯಿಂದ ಕೇಳುವ ಭಾಗ್ಯ ನೆರೆದ ಪ್ರೇಕ್ಷಕ ವರ್ಗಕ್ಕೆ ಒದಗಿಬಂದಿತ್ತು.

ಸೇವೆಯನ್ನು ಮಾಡಲು ಜ್ಞಾನದ ಬಾಗಿಲನ್ನು ತೆರೆ ಭಗವಂತ. ಒಳದೃಷ್ಟಿಯ ’ಬಾಗಿಲನು ತೆರೆದು’ ಅವಕಾಶವನ್ನು ಒದಗಿಸು ದೇವರೇ ಎಂದು ಕನಕದಾಸರು ಪರಿಪರಿಯಾಗಿ ಭಗವಂತನನ್ನು ಕೇಳಿಕೊಳ್ಳುವ ಸಾಲುಗಳನ್ನು ಬೆಂಗಳೂರಿನ ಎಂ.ಎಸ್.ಗಿರಿಧರ್ ಮತ್ತು ಬಳಗದವರು ಮಧುರವಾಗಿ ಹಾಡಿದರು.

’ಬಂದಳ್ ನೋಡೆ ಬಂದಳ್ ನೋಡೆ ಭಾಗ್ಯದ ಲಕ್ಷ್ಮೀ’ ಎಂದು ಸಹಗಾಯಕಿ ವಸುಧಾ ಹಾಡಿಗೆ ಸಾಕ್ಷಾತ್ ಲಕ್ಷ್ಮಿಯೇ ತಲೆದೂಗುತ್ತಿದ್ದಾಳೆ ಎಂದು ಭಾಸವಾಗುತ್ತಿತ್ತು. ಭಾವವಿಲ್ಲದೆ ಯಾವ ಕೆಲಸ ಮಾಡಿದರೂ ಅಭಾವ ಉಂಟಾಗುತ್ತದೆ ಎಂಬ ಗಿರಿಧರ್ ಅವರ ಮಾತುಗಳು ನೆರೆದವರು ಹೌದು ಎನಿಸುವಷ್ಟು ಹಿತವೆನಿಸಿತ್ತು. ’ಶಿವ ಶಿವ ಎನ್ನಿರೋ’ ಎಂಬ ದಾಸ ಪದದೊಂದಿಗೆ ಎಲ್ಲರೂ ಶಿವ ಧ್ಯಾನ ಮಾಡಿ ಪ್ರತಿಕಿಯಿಸುವಂತೆ ಮಾಡಿದ ಕೀರ್ತಿ ತಂಡಕ್ಕೆ ಸಲ್ಲುತ್ತದೆ.

ಪ್ರೀತಿ ಇದ್ದಲ್ಲಿ ಭಗವಂತ ಇರುತ್ತಾನೆ ಎಂಬ ತಿರುಳನ್ನು ಇಟ್ಟುಕೊಂಡು ’ಬಾರೋ ಕೃಷ್ಣಯ್ಯ ನಿನ್ನ ಮುಖವ ತೋರೋ’ ಎಂಬ ಭಕ್ತಿಗೀತೆ ಹಾಡಿ ಎಲ್ಲರ ಮನಸೂರೆಗೊಳಿಸಿದರು. ’ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ’ ಎಂಬ ಹಾಡು ಕೇಳುಗರನ್ನು ತನ್ಮಯಗೊಳಿಸಿತು. ಪುರಂದರದಾಸರ ಕೀರ್ತನೆ ಅಲ್ಲಿದ್ದವರ ಮನಕೆ ಹಿತ ನೀಡಿತು. ’ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯ ನಾಮ’ ಎಂಬ ಸಾಲುಗಳು ಪರಿಶ್ರಮ ಹಾಗೂ ನಿಶ್ಕಲ್ಮಶ ಭಕ್ತಿಯ ಮಹತ್ವವನ್ನು ಹಿಡಿದಿಟ್ಟವು.

ಸರಳ ಪದಗಳ ಮುಖೇನ ಜೀವನ ಪಾಠಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ದಾಸಸಾಹಿತ್ಯದ ಸಾಲುಗಳಿಗೆ ವಾದ್ಯವೃಂದದ ಪ್ರತಿಭಾಕೌಶಲ್ಯವು ಅರ್ಥವಂತಿಕೆಯನ್ನು ತಂದುಕೊಟ್ಟಿತು. ಮನಸ್ಸಿಗೆ ಮುದ ನೀಡುವ ಹಾಸ್ಯ, ಕರ್ಣಾನಂದಗೊಳಿಸುವ ದಾಸರ ಹಾಡುಗಳಿಗೆ ಪ್ರಸಾದ್ ಕುಮಾರ್(ತಬಲ), ಸುಮಂತ್(ಗೆಜ್ಜೆ), ಆತ್ಮಸ್ವರೂಪ್(ಕೀಬೋರ್ಡ್) ಸಹಕರಿಸಿದರು. ರಂಜಿತ್, ಆಶಿಶ್, ಚಂದನ್, ಅಮೀಶ್ ಕುಮಾರ್, ನಿಹಾರಿಕಾ, ಸೌಭಾಗ್ಯ, ಲಕ್ಷ್ಮೀ, ಸೃಜನಾ, ಆನಿ ಸಹಗಾಯಕರಾಗಿದ್ದರು.

Exit mobile version