Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ವಂಡ್ಸೆ: 2000-01ನೇ ಬ್ಯಾಚ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ ಮಿಲನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಗು, ಅಳು, ಸಾರ್ಥಕತೆ, ಧನ್ಯತಾ ಭಾವ, ಹಳೆಯ ನೆನಪುಗಳು, ತುಂಟಾಟಗಳ ಮೆಲುಕು, ಏನೋ ಒಂದನ್ನು ಗಳಿಸಿದ ಮನೋಭಾವ, 22 ವರ್ಷಗಳ ಹಿಂದಿನ ಸಹಪಾಠಿಗಳೆಲ್ಲರೂ ಒಂದೇ ಸಭೆಯಲ್ಲಿ, 22 ವರ್ಷಗಳ ಹಿಂದಿನ ಗುರುಗಳೆಲ್ಲರೂ ಒಂದೇ ವೇದಿಕೆಯಲ್ಲಿ…

ಇವೆಲ್ಲವೂ ಕಾಣಸಿಕ್ಕಿದ್ದು ಇತ್ತೀಚಿಗೆ ಕುಂದಾಪುರ ತಾಲೂಕಿನ ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್ ನಲ್ಲಿ. ಹೌದು, 2000-01ನೇ ಸಾಲಿನಲ್ಲಿ ಹತ್ತನೇ ತರಗತಿಯ ಓದನ್ನು ಸರ್ಕಾರಿ ಪ್ರೌಢಶಾಲೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್) ನೆಂಪು-ವಂಡ್ಸೆಯಲ್ಲಿ ಮುಗಿಸಿದ ವಿದ್ಯಾರ್ಥಿಗಳೆಲ್ಲರೂ ಆವತ್ತು ಪುನರ್ಮಿಲನ-ಗುರುವಂದನ ಎಂಬ ಶೀರ್ಷಿಕೆಯಡಿ ನಡೆಸಿದ ಕಾರ್ಯಕ್ರಮದ ಹೈಲೈಟ್ಸ್ಗಳಿವು.

ಸುಮಾರು ನಾಲ್ಕಾರು ತಿಂಗಳುಗಳ ಹಿಂದೆ ಕಂಡ ಕನಸೊಂದು ಆವತ್ತು ನನಸಾದ ದಿನ. ಆ ದಿನಗಳಲ್ಲಿ ಸಹೋದ್ಯೋಗಿಗಳಾಗಿದ್ದ ಶಿಕ್ಷಕರೆಲ್ಲರೂ ಶಾಲೆಯ ಪರಿಸರದಲ್ಲಿ ಅಥವಾ ಪರಿಸರದ ಇತಿಹಾಸದಲ್ಲಿ ನಡೆದ ಮೊಟ್ಟಮೊದಲ ಗುರುವಂದನ ಕಾರ್ಯಕ್ರಮದಲ್ಲಿ ಭಾಗಿಯಾದ ಹೆಮ್ಮೆಯ ಕ್ಷಣ. ಒಂದು ರೀತಿಯಲ್ಲಿ ಇದು ಹೆಚ್ಚಿನ ಶಿಕ್ಷಕರುಗಳಿಗೂ ಪುನರ್ಮಿಲನವಾದ ದಿನ. ಓದನ್ನು ಮುಗಿಸಿ ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸ್ನೇಹಿತರೆಲ್ಲರೂ ಮತ್ತೊಮ್ಮೆ ಮಕ್ಕಳಾದ ದಿನ. ಇದಕ್ಕೆ ಸಾಕ್ಷಿಯಾದವರೆಲ್ಲರಿಗೂ ಇದೊಂದು ಮರೆಯಲಾಗದ ದಿನವೆಂಬುದಂತೂ ಸತ್ಯ. ತಮ್ಮ ಸ್ವಂತ ಕಾಲುಗಳಲ್ಲಿ ನಿಂತಿರುವ ವಿದ್ಯಾರ್ಥಿಗಳೆಲ್ಲರಿಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರು ಕರೆಕೊಟ್ಟ ದಿನ. ಆ ನಿಟ್ಟಿನಲ್ಲಿ ಮುನ್ನಡೆಯಬೇಕೆಂಬ ವಿದ್ಯಾರ್ಥಿಗಳೊಂದಿಗೆ ತಾವೂ ಸೇರಿಕೊಳ್ಳುತ್ತೇವೆಂಬ ಶಿಕ್ಷಕರ ಮಾತಿಗಿಂತ ಹೆಚ್ಚಿನ ಪ್ರೋತ್ಸಾಹ ಇನ್ನೇನು ಬೇಕು. ಸರ್ಕಾರಿ ಶಾಲೆಯನ್ನು ವಿಚಿತ್ರ ರೀತಿಯಲ್ಲಿ ನೋಡುವ ಜನತೆಗೆ, ಸರ್ಕಾರಿ ಶಾಲೆಯಲ್ಲೇ ಓದಿ ಬೇರೆ ಬೇರೆ ಊರುಗಳಲ್ಲಿ ಇದ್ದು, ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡ ವಿದ್ಯಾರ್ಥಿಗಳ ಈ ಪ್ರಯತ್ನವು ಮುಂದಿನ ಪೀಳಿಗೆಗೊಂದು ಮಾದರಿಯಾಗಲಿ, ಬುನಾದಿಯಾಗಲಿ. ಪರಿಸರದಲ್ಲಿ ಇನ್ನೂ ಹತ್ತು ಹಲವು ಈ ತರದ ಕಾರ್ಯಕ್ರಮಗಳು ನಡೆಯಲಿ.

Exit mobile version