Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಕನ್ನಡ ಅಕಾಡೆಮಿ ಹಾಗೂ ಕುಂದಾಪ್ರ ಕನ್ನಡ ಪೀಠ ಸ್ಥಾಪನೆಗೆ ಸರಕಾರ ಆಸ್ಥೆ ವಹಿಸಲಿ

18ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ನಾವು ಕನ್ನಡಿಗರಾಗಿ ಎಂದಿಗೂ ಕನ್ನಡ ದುರ್ಬಲವಾಗಲು ಬಿಡಬಾರದು. ಯಾವ ಮಾಧ್ಯಮದಲ್ಲಿ ಮಕ್ಕಳು ಕಲಿತರೂ ಯಾವ ರಾಜ್ಯ, ದೇಶದಲ್ಲಿ ವಾಸಿಸುತ್ತಿದ್ದರೂ ಮಾತೃಭಾಷೆ ಮರೆಯಬಾರದು. ಅದರಲ್ಲೂ ನಮ್ಮ ಕುಂದ ಕನ್ನಡ ಭಾಷೆ ಅಪೂರ್ವವಾದುದು. ಕುಂದಾಪುರ ಕನ್ನಡ ಬೆಳವಣಿಗೆಯಲ್ಲಿ ಯುವ ಜನರು ಆಸಕ್ತಿ ವಹಿಸುತ್ತಿರುವುದು ಸಂತಸದ ವಿಷಯ ಎಂದು ಸಾಹಿತಿ, ಅಂಕಣಕಾರ ಕೋ.ಶಿವಾನಂದ ಕಾರಂತ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಚ್.ವಿಠಲ ಶೆಣೈ ಸಭಾಂಗಣದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ವೇದಿಕೆಯಲ್ಲಿ ಭಾನುವಾರ ಜರಗಿದ ಕುಂದಾಪುರ ತಾಲೂಕು ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನ-೨೦೨೩ ‘ಗಂಗಾವಳಿ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ ೩೦೦ಕ್ಕೂ ಹೆಚ್ಚು ಗ್ರಾಮ, ೨೫ ಲಕ್ಷಕ್ಕೂ ಹೆಚ್ಚು ಮಂದಿ ಮಾತನಾಡುವ ಕುಂದಾಪುರ ಕನ್ನಡ ಭಾಷೆಗೆ ಸರಕಾರ ವಿಶೇಷವಾದ ಸ್ಥಾನಮಾನ ನೀಡಬೇಕು. ಕುಂದಾಪ್ರ ಕನ್ನಡ ಅಕಾಡೆಮಿ ಹಾಗೂ ಕುಂದಾಪ್ರ ಕನ್ನಡ ಪೀಠ ಸ್ಥಾಪನೆ ಮಾಡಬೇಕಿದೆ. ಇದಕ್ಕೆ ನಮ್ಮ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಗಂಭೀರ ಪ್ರಯತ್ನ ನಡೆಸದಿರುವುದು ಬೇಸರದ ಸಂಗತಿ. ಯುವ ಜನಾಂಗ ಈ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ ಎಂದು ಅವರು ಹೇಳಿದರು.

ಅಧ್ಭುತವಾದ ಪ್ರಾಕೃತಿಕ ಸಂಪತ್ತು ಹೊಂದಿರುವ ಕಡಲು, ನದಿಗಳು, ಮಲೆನಾಡಿನ ಸಮಾಗಮವಾಗಿರುವ ಈ ಕರಾವಳಿ ಪ್ರದೇಶ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಗೊಳಿಸಿ ಅದಷ್ಟು ಕನ್ನಡಿಗ ಯುವ ಜನರಿಗೆ ಉದ್ಯೋಗಾವಕಾಶ ದೊರೆಯುವಂತಾಗಬೇಕು. ಕುಂದಾಪುರ ಜನರು ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದು ಇವೆಲ್ಲವನ್ನು ತಿಳಿಸುವ ಒಂದು ಅಪೂರ್ವವಾದ ವಸ್ತು ಪ್ರದರ್ಶನ ಕೇಂದ್ರ ಸ್ಥಾಪನೆಗೊಳ್ಳಬೇಕು. ಗಂಗೊಳ್ಳಿ ಐತಿಹಾಸಿಕ ಪ್ರಸಿದ್ಧ ಗ್ರಾಮವಾಗಿದ್ದು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಮೂಲೆ ಗುಂಪಾದಂತಾಗಿದೆ. ಹೀಗಾಗಿ ಗಂಗೊಳ್ಳಿ-ಕುಂದಾಪು ನಡುವೆ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ. ಸರಕಾರ ಸರಕಾರಿ ಶಾಲೆಗಳಲ್ಲಿ ನೀಡುವ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೂ ಒದಗಿಸಬೇಕು. ಕರ್ನಾಟಕಕ್ಕೆ ಕೀರ್ತಿ ತಂಡ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಬಹುಪಯೋಗಿ ಭವನ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಮ್ಮೇಳನವನ್ನು ಹಾಗೂ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಗಂಗೊಳ್ಳಿ ಮೂಲದ ಬೆಂಗಳೂರಿನ ಹೊಟೇಲ್ ಉದ್ಯಮಿ ಜಗನ್ನಾಥ ವಿ.ಪೈ ದೇಶ, ಧರ್ಮ, ನೆಲ ಜಲ ಭಾಷೆಯನ್ನು ಯಾರು ಗೌರವಿಸುತ್ತಾರೋ ಅವರೇ ಶ್ರೇಷ್ಠರು. ಆಧುನಿಕ ಕಾಲದಲ್ಲಿ ಜನರೆಲ್ಲರೂ ಆಂಗ್ಲ ಭಾ?ಗೆ ಆಕರ್ಷಿಸಿರುವುದು ದುರಾದೃಷ್ಟ. ಅದರಲ್ಲೂ ಇಲ್ಲಿಯ ತನಕ ಯಾವುದೇ ಸರ್ಕಾರಗಳು ಕನ್ನಡ ಕಲಿಕೆ ಖಡ್ಡಾಯ ಮಾಡಲು ಮೀನಾಮೇಶ ಎಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇಂದೇನಾದರೂ ಅತಿ ಹೆಚ್ಯು ಕನ್ನಡ ಮಾತನಾಡುವ ಪ್ರದೇಶಗಳೆಂದರೆ ಅದು ಬಹುತೇಕ ಹಳ್ಳಿಗಳೆಂದರೆ ತಪ್ಪಾಗಲಾರದು ಎಂದು ಹೇಳಿದರು.

ವ್ಯವಹಾರಕ್ಕೆ ಬೇರೆ ಬೇರೆ ಭಾಷೆ ಕಲಿಯುವುದು ಸರಿ. ಆದರೆ ಆಂಗ್ಲ ಭಾಷೆ ಬಳಸಿದರೆ ಸಮಾಜದಲ್ಲಿ ಹೆಚ್ಚು ಗೌರವ ಸಿಗುತ್ತದೆ ಎಂದು ತಿಳಿದು ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಮಾದ್ಯಮ ಶಾಲೆಗೆ ಹೆಚ್ಚಿನ ಹಣ ಕೊಟ್ಟು ಸೇರಿಸಿ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಹೊರ ದೇಶಕ್ಕೆ ಕಳುಹಿಸಿ ಅವರು ಇಂದು ತಾವು ಹುಟ್ಟಿದ ಊರು, ಶಾಲೆ, ಭಾಷೆ ಮತ್ತು ಕಷ್ಟ ಪಟ್ಟು ಓದಿಸಿದ ಪೋ?ಕರನ್ನೇ ಮರೆಯುತ್ತಿರುವುದು ಅತ್ಯಂತ ದುಖದ ಸಂಗತಿ. ಮಕ್ಕಳಿಗಾಗಿ ಆಸ್ತಿ ಮಾಡಿ ಇಟ್ಟು ಅವರನ್ನು ಹಾಳು ಮಾಡುವ ಬದಲು ಮಕ್ಕಳೇ ನಮ್ಮ ಆಸ್ತಿ ಎಂಬಂತೆ ಒಳ್ಳೆಯ ವಿಧ್ಯಾಭ್ಯಾಸ, ಸಂಸ್ಕ್ರತಿ ಕಲಿಸಿದರೆ ಅವರು ಎಂದೂ ಹುಟ್ಟಿದ ಊರು, ಶಾಲೆ, ಭಾ? ಮತ್ತು ಪೋ?ಕರನ್ನ ಮರೆಯುವುದಿಲ್ಲ ಎಂದರು.

ನಮ್ಮ ದುರಾದ್ರಷ್ಠವೆಂದರೆ ನಮ್ಮ ರಾಜ್ಯದಲ್ಲಿ ಬಹುತೇಕ ಹೊರ ರಾಜ್ಯದವರೇ ಕೆಲಸಕ್ಕೆ ನೇಮಕವಾಗುವುದು. ನೆರೆ ರಾಜ್ಯದವರಿಗೆ ನೋಡಿಯಾದರೂ ನಮ್ಮ ಸರ್ಕಾರದವರು ಯಾವುದೇ ಕೆಲಸಕ್ಕೆ ನಮ್ಮ ರಾಜ್ಯದವರಿಗೆ ಪ್ರಾಶಸ್ತ್ಯ ನೀಡಿದ್ದಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಕ್ಕೆ ನಮ್ಮ ಜನರು ಹೋಗುವುದನ್ನು ತಪ್ಪಿಸಬಹುದು. ಆಂಗ್ಲ ಮಾದ್ಯಮ ಶಾಲೆಯ ವಿಧ್ಯಾರ್ಥಿಗಳಿಗಿಂತ ಕನ್ನಡ ಮಾಧ್ಯಮದಲ್ಲಿ ಓದಿದ ವಿಧ್ಯಾರ್ಥಿಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ ಎಂದು ಅವರು ಹೇಳಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ರಾಷ್ಟ್ರ ಧ್ವಜಾರೋಹಣ ಮತ್ತು ಕಸಾಪ ಕುಂದಾಪುರ ಘಟಕದ ಅಧ್ಯಕ್ಷ ಡಾ. ಉಮೇಶ ಪುತ್ರನ್ ಪರಿಷತ್ ಧ್ವಜಾರೋಹಣ ಮಾಡಿದರು. ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ಮತ್ತು ಸಮ್ಮೇಳನದ ಮೆರವಣಿಗೆಗ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು. ಚಾಲನೆ ನೀಡಿದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಸಮ್ಮೇಳನ ಸಮಿತಿ ಕಾರ್ಯದರ್ಶಿ ಯು.ಎಸ್.ಶೆಣೈ, ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಕಸಾಪ ಉಡುಪಿ ಜಿಲ್ಲೆ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಗೌರವ ಕೋಶಾಧ್ಯಕ್ಷ ಮನೋಹರ ಪಿ., ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರ ಐತಾಳ್, ಬೈಂದೂರು ತಾಲೂಕು ಕಸಾಪ ಅಧ್ಯಕ್ಷ ಡಾ.ರಘು ನಾಯ್ಕ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಅಕ್ಷತಾ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರ ಕುರಿತಾದ ವಾಗ್ವೈಖರಿಯ ವರ್ಣನಾವಿಲಾಸಕ್ಕೊಂದು ರೂಪಕ ಪುಸ್ತಕ, ಕೋ.ಶಿವಾನಂದ ಕಾರಂತ್ ಅವರು ಬರೆದ ಬರೆದ ೧೦ ಮುತ್ತುಗಳು, ಅರಿವಿಗೆ ಬಾರದವರು ಪುಸ್ತಕಗಳ ಬಿಡುಗಡೆ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಕುಣಿತ ಭಜನಾ ತಂಡಗಳು, ಚಂಡೆ ವಾದನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ದಫ್ ತಂಡ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಶೋಭಾಯಾತ್ರೆಯ ಮೆರಗು ಹೆಚ್ಚಿಸಿದರು.

ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಸಾಹಿತಿ ಬೆಳಗೋಡು ರಮೇಶ ಭಟ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಗಣೇಶ ಕಾಮತ್ ಉದ್ಘಾಟಕರನ್ನು ಪರಿಚಯಿಸಿದರು. ಉಮೇಶ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ಮಂಜುನಾಥ ಕೆ.ಎಸ್. ವಂದಿಸಿದರು.

Exit mobile version