ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಮೀಟ್ – ಗ್ರೀಟ್ ಕಾರ್ಯಕ್ರಮ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾಷೆ ಮಾತಿಗೆ ಮಾತ್ರ ಸೀಮಿತವಲ್ಲ. ಅದು ಆಯಾ ಭಾಷಿಕರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಅದು ನಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿಯೂ ಹೌದು. ಒಂದು ಊರಿನ ಸಂಸ್ಕ್ರತಿ, ಸಾಂಸ್ಕ್ರತಿಕ ಪರಂಪರೆ, ಆಚರಣೆಗಳು ಅಲ್ಲಿನ ಜನರ ಒಡನಾಟದಿಂದ ತಿಳಿಯುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪುರ ಸಹನಾ ಮಿನಿ ಹಾಲ್‌ನಲ್ಲಿ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪ್ರ ಕನ್ನಡಿಗರ ಸಾಧನೆ ಅಪಾರವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಡನ್ನು ಉಳಿಸಲು ಹೆಣಗಬೇಕಾಗಿರುವುದು ವಿಷಾದನೀಯ ಎಂದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರೂ ಸಹ ದುಬ ನೆಲದಲ್ಲೂ ಕುಂದಾಪುರ ಭಾಷೆಯ ಅಭಿಮಾನದಿಂದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿದ್ದಾಗ ಅಭಿವೃದ್ದಿ ಸಾಧ್ಯ ಎಂದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಕುಂದಾಪುರ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕುಂದಾಪ್ರ ಕನ್ನಡ ಸಂಸ್ಥೆಯ ಮೂಲಕ ಕುಂದಾಪುರ ಕನ್ನಡ ಮಾತನಾಡುವ ಪ್ರದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವುದು, ಉದ್ಯೋಗ ಅರಸಿ ಗಲ್ಘ್ ರಾಷ್ಟ್ರಗಳಿಗೆ ಬರುವ ಉದ್ಯೋಗಾಕಾಂಕ್ಷಿಗಳಿಗೆ ಎರಡು ತಿಂಗಳ ಅವಧಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು, ಊರಿಗೆ ಬಂದಾಗ ನಾವುಗಳ ಕಲಿತ ಕನ್ನಡ ಶಾಲೆಗಳಿಗೆ ತೆರಳಿ ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿ ನಿವಾರಿಸಲು ಶ್ರಮಿಸುವುದು, ಕುಂದಾಪುರ ಕನ್ನಡ ಅಕಾಡೆಮಿ, ವಿಮಾನ ನಿಲ್ದಾಣ ಮೊದಲಾದವುಗಳ ಅನುಷ್ಠಾನಕ್ಕೆ ಶ್ರಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಬಂದೂರು ಬೆಸುಗೆ ಫೌಂಡೇಶನ್ ಅಧ್ಯಕ್ಷ ಕೆ. ವೆಂಕಟೇಶ ಕಿಣಿ, ಕತಾರ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಕತಾರ್ ಕನ್ನಡ ಸಂಘದ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಕಾರ್ಯದರ್ಶಿ ಸುಧಾಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಪಘಾತ ನಿಧಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಯಿತು. ಕುಂದಾಪುರ ಭಾಷೆ ಅಕಾಡೆಮಿ ಸ್ಥಾಪಿಸುವ ಕುರಿತು, ಬಂದೂರು ವಿಮಾನ ನಿಲ್ದಾಣ ಮತ್ತು ತಾಲೂಕು ಪಂಚಾಯತ್‌ನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಕಛೇರಿ ತೆರೆಯಲು ಸ್ಥಳವಕಾಶ ನೀಡುವ ಕುರಿತು ಮನವಿ ನೀಡಲಾಯಿತು. ಪತ್ರಕರ್ತ ಅರುಣ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.