Kundapra.com ಕುಂದಾಪ್ರ ಡಾಟ್ ಕಾಂ

ಲಂಡನ್‌ನಲ್ಲಿ ಸಪ್ತತಾಂಡವ ನೃತ್ಯ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಾಂಸ್ಕೃತಿಕ ಪ್ರಸಾರ ಮತ್ತು ಉನ್ನತಿಗಾಗಿ ಇಂಗ್ಲಂಡ್ನಲ್ಲಿ ಕ್ರಿಯಾಶೀಲವಾಗಿರುವ ’ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್’ ಈಚೆಗೆ ಲಂಡನ್ನ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಶಿವರಾತ್ರಿ ಉತ್ಸವದಲ್ಲಿ ’ಸಪ್ತತಾಂಡವ’ ನೃತ್ಯ ಪ್ರದರ್ಶನ ಸಂಪನ್ನವಾಯಿತು.

ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ನೃತ್ಯ ಕಲಾವಿದರಾದ ಶಿವಾನಿ ಭಂಡಾರ್ಕಾರ್, ಆರ್ಯ ಅರುಣ್, ಲಕ್ಷ್ಮೀ ಅವೀನ್, ರಾಗಸುಧಾ ವಿಂಜಮೂರಿ, ಮಂಜು ಸುನಿಲ್, ಡಾ. ಪ್ರೀತಾ ದಶ್ಮ್ಮಹಾಪಾತ್ರ ಭರತನಾಟ್ಯ, ಕಥಕ್, ಒಡಿಸ್ಸಿ, ಕುಚಿಪುಡಿ, ಮೋಹಿನಿಯಾಟ್ಟಮ್ ನೃತ್ಯ ಪ್ರಕಾರಗಳ ಶಿವತಾಂಡವ ಪ್ರದರ್ಶಿಸಿದರೆ, ಕರ್ನಾಟಕದ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ ತಾಂಡವನೃತ್ಯ ಸಾದರಪಡಿಸಿದರು. ರಾಗಸುಧಾ ವಿಂಜಮೂರಿ ’ಶಿವೋಹಮ್’ ಹೆಸರಿನಲ್ಲಿ ಈ ವಿನೂತನ ನೃತ್ಯಸಂಗಮವನ್ನು ಕಲ್ಪಿಸಿ, ನಿರ್ದೇಶಿಸಿದ್ದರು. ನೃತ್ಯಗಳಿಗೆ ಆಯಾ ಭಾಷೆಯಲ್ಲಿ ಶಿವಧ್ಯಾನ ಶ್ಲೋಕ ಮತ್ತು ಗೀತೆಗಳನ್ನು ಬಳಸಲಾಗಿತ್ತು. ಯಕ್ಷಗಾನಕ್ಕೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್ಲು ಅವರು ಹಾಡಿದ ಯಕ್ಷಗಾನ ಶೈಲಿಯ ಶಿವಸ್ತುತಿಗೆ ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಲೆ ವಾದನ ಇರುವ ಧ್ವನಿ ಮುದ್ರಣದ ನೆರವು ಪಡೆಯಲಾಗಿತ್ತು. ಆರಂಭದಲ್ಲಿ ೨೧ ಮಂದಿ ಕಿರಿಯ ಕಲಾವಿದರು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ವಿಶಿಷ್ಟ ಕಾರ್ಯಕ್ರಮವು ಇಂಗ್ಲೆಂಡ್ನ ವಿವಿಧೆಡೆಯಿಂದ ಬಂದಿದ್ದ ಮುನ್ನೂರಕ್ಕೂ ಅಧಿಕ ಪ್ರೇಕ್ಷಕgರನ್ನು ಮಂತ್ರಮುಗ್ಧಗೊಳಿಸಿತು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ಲೇಖಕ, ಲಂಡನ್ ನೆಹರು ಸೆಂಟರ್ನ ನಿರ್ದೇಶಕ ಅಮಿಷ್ ತ್ರಿಪಾಠಿ ಶಿವರಾತ್ರಿಯ ಮಹತ್ವವನ್ನು ವಿವರಿಸಿ ಕಾರ್ಯಕ್ರಮವನ್ನು ಬಹುವಾಗಿ ಶ್ಲಾಘಿಸಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ನಂದಕುಮಾರ್ ಕಲಾವಿದರನ್ನು ಗೌರವಿಸಿದರು. ಸುಶಿಲ್ ರಪ್ತಾವರ್ ವಂದಿಸಿದರು. ರಾಧಿಕಾ ಜೋಷಿ ಮತ್ತು ರಾಜ್ ಅಗರ್ವಾಲ್ ನಿರೂಪಿಸಿದರು.

Exit mobile version