Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ದೇವಿ ಮೂಕಾಂಬಿ ಸರ್ವಿಸ್ ಅಪಾರ್ಟ್ಮೆಂಟ್, ರಾಜ್ಯದ ಮೊದಲ ಬಯೋ ಡೈಜಿಸ್ಟರ್ ಎಸ್‌ಟಿಪಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು
: ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸುತ್ತಲಿನ ಸ್ಪಚ್ಛತೆ ಹಾಗೂ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಅದನ್ನು ಸಾಧ್ಯವಾಗಿಸಲು ಮೊದಲು ಮನವೊಲಿಕೆ, ಸಾಧ್ಯವಾಗದಿದ್ದರೆ ಹೋರಾಟದ ಹಾದಿಯನ್ನೇ ಹಿಡಿಯಬೇಕಾಗುತ್ತದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಕೊಲ್ಲೂರು ಕಾಶಿಹೊಳೆಯಲ್ಲಿ ಆರ್.ಎಸ್. ವೆಂಚರ್ ಹಾಗೂ ಮೂಕಾಂಬಿಕಾ ಡೆವಲಪರ್ಸ್ ಜಂಟಿಯಾಗಿ ನಿರ್ಮಿಸಿದ ದೇವಿ ಮೂಕಾಂಬಿ ಸರ್ವಿಸ್ ಅಪಾರ್ಟ್ಮೆಂಟ್ ಹಾಗೂ ರಾಜ್ಯದ ಮೊದಲ ಬಯೋ ಡೈಜಿಸ್ಟ್ ಎಸ್ಟಿಪಿ ಉದ್ಘಾಟಿಸಿ ಮಾತನಾಡಿ ಸ್ವಚ್ಛತೆಯ ಬಗ್ಗೆ ನಾವು ಮಾತನಾಡುತ್ತಿರುವಾಗಲೇ ಬಯೋ ಡೈಜಿಸ್ಟರ್ ಸೆಫ್ಟಿಕ್ ಟ್ಯಾಂಕ್ ಉಪಯೋಗಿಸಿ ನೈರ್ಮಲ್ಯತೆಗೆ ಒಂದು ಮಾದರಿ ಸಿದ್ಧಪಡಿಸಿಕೊಟ್ಟಿದೆ. ಇದರ ಬಳಕೆ ಎಲ್ಲೆಡೆಯೂ ಆದರೆ ನೈರ್ಮಲ್ಯ ತಾನಾಗಿಯೇ ಬರಲಿದೆ ಎಂದರು.

ಬೈಂದೂರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಇಕೋ ಟೂರಿಸಂ, ಟೆಂಪಲ್ ಟೂರಿಸಂ ಅಭಿವೃದ್ಧಿಗೆ ಸರಕಾರ, ಜನಪ್ರತಿನಿಧಿಗಳೊಂದಿಗೆ ಜನರೂ ಕೂಡ ಮನಸ್ಸು ಮಾಡಬೇಕಿದೆ. ಮನಸ್ಥಿತಿ ಬದಲಾಗದ ಅಭಿವೃದ್ಧಿ ಸಾಧ್ಯವಿಲ್ಲ. ಸಮೃದ್ದ ಬೈಂದೂರಿನ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ದೇವಿ ಮೂಕಾಂಬಿ ಸರ್ವಿಸ್ ಅಪಾರ್ಟ್ಮೆಂಟ್ ಪ್ರವರ್ತಕರಾದ ಕೆ. ವೆಂಕಟೇಶ ಕಿಣಿ ಮಾತನಾಡಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಮ್ಯಾಕ್ ಸಂಸ್ಥೆಯ ಸಹಯೋಗದೊಂದಿಗೆ ಮಾನವ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗಿದೆ. ಸೆಫ್ಟಿಕ್ ಟ್ಯಾಂಕ್ ಜೈವಿಕ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಆಮ್ಲಜನಕರಹಿತ ಬ್ಯಾಕ್ಟೀರಿಯಾ ಇನಾಕ್ಯುಲಮ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವುದರಿಂದ ಮ್ಯಾಕ್ ತಂತ್ರಜ್ಞಾನದೊಂದಿಗೆ ಮಾನವ ತ್ಯಾಜ್ಯವನ್ನು ವಿಘಟನೆಗೊಳಿಸುವ ಹಾಗೂ ಜೀರ್ಣಿಸಿಕೊಳ್ಳುವ ಸುಷ್ಮಾಣುಗಳನ್ನು ಬಯೋ ಸೆಪ್ಟಿಕ್ ಟ್ಯಾಂಕಿಗೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯೊಂದಿಗೆ ಒಮ್ಮೆ ಜೈವಿಕ ಸೆಪ್ಟಿಕ್ ಟ್ಯಾಂಕ್ ಅಳವಡಿಸಿದರೇ ಮತ್ತೆ ಯಾವುದೇ ನಿರ್ವಹಣೆಯ ಅಗತ್ಯವಿರುವುದಿಲ್ಲ. ಬಯೋ ಡೈಜಿಸ್ಟರ್ ಟ್ಯಾಂಕ್ ಓಲಗೆ ಇರುವ ಸೂಕ್ಷಾಣು ಜೀವಿಗಳು ಮಾನವ ತ್ಯಾಜ್ಯವನ್ನು ಜೀರ್ಣಿಸಿಕೊಳ್ಳುವುದರ ಜೊತೆಗೆ ಅಲ್ಲಿನ ನೀರು ಸಂಸ್ಕರಣೆಗೊಳ್ಳುತ್ತದೆ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ ಶುಭಸಂಸನೆಗೈದರು. ಈ ಸಂದರ್ಭದಲ್ಲಿ ರಾಧಾ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ:
► ಕರ್ನಾಟಕದ ಮಾರುಕಟ್ಟೆಗೆ ಲಗ್ಗೆಯಿಟ್ಟ ಮ್ಯಾಕ್ ಬಯೋ ಡೈಜಿಸ್ಟರ್ – ಸೆಫ್ಟಿಕ್ ಟ್ಯಾಂಕ್ – https://kundapraa.com/?p=60472 .

ಈ ವೇಳೆ ಫ್ಲಾಟ್ ಮಾಲಿಕರುಗಳಿಗೆ ಕೀ ಹಸ್ತಾಂತರಿಸಲಾಯಿತು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

Exit mobile version