Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಗ್ಯಾಸ್‌ಲೈಟ್ ಬೆಳಕಿನಲ್ಲಿ ಬಂದ ಹುಲಿರಾಯ!

ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕಾಲ ಉರುಳಿದ ಹಾಗೇ ನಮ್ಮ ಆಸಕ್ತಿಯೂ ಬದಲಾಗುತ್ತದೆ. ಹೊಸತನಕ್ಕೆ ತುಡಿಯುವ ಈ ಬದಲಾವಣೆಯೊಂದಿಗೆ ನಮ್ಮ ಕಲೆ, ಸಂಸ್ಕೃತಿ ಸಂಪ್ರದಾಯಗಳ ಪೈಕಿ ಕೆಲವು ಹೊಸ ಆಯಾಮ ಪಡೆದು ಮತ್ತೆ ನಮ್ಮ ಮುಂದೆ ಬಂದರೆ, ಇನ್ನು ಕೆಲವು ಮರೆಯಾಗಿಬಿಡುತ್ತವೆ. ಆದರೆ ಅಪರೂಪಕ್ಕೊಂದು ಸಂಸ್ಥೆಗಳು ಈ ಮರೆಯಾಗುವ ಕಲೆಗಳಿಗೆ ಮರುಜೀವ ತುಂಬುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತವೆ.

ಹೌದು. ಕಲಾಕ್ಷೇತ್ರ ಕುಂದಾಪುರ ಅಂಥಹದ್ದೊಂದು ಭಿನ್ನ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಆಯೋಜಿಸಿತ್ತು. ಹಿಂದೆಲ್ಲ ನವರಾತ್ರಿಯ ಸಮಯದಲ್ಲಿ ರಾತ್ರಿಯ ವೇಳೆಗೆ ಹೆಚ್ಚಾಗಿ ಕಂಡುಬರುತ್ತಿದ್ದ ಹುಲಿವೇಷವನ್ನು ಮತ್ತೆ ರಾತ್ರಿಯಲ್ಲಿಯೇ ಕಾಣುವಂತೆ ಮಾಡಿತ್ತು. ಅದೂ ಗ್ಯಾಸ್ ಲೈಟ್ ಬೆಳಕಿನೊಂದಿಗೆ. ಹುಲಿವೇಷ ಇಂದು ವ್ಯಾವಹಾರಿಕ ತಿರುವನ್ನು ಪಡೆದಿದೆ. ಹೊಸಬರು ಬರುತ್ತಿಲ್ಲ. ಕಲಿಯುವವರ್ಯಾರು, ಕುಣಿಯುವವರ್ಯಾರು ಪ್ರಶ್ನೆ. ಕುಣಿದರೂ ಅದು ಪಟ್ಟಣ, ದನಿಗಳ ಮನೆಗಳಿಗಷ್ಟೇ ಸೀಮಿತವಾಗಿದೆ. ಹೀಗಿರುವಾಗ ಹಳೆಯ ದಿನಗಳನ್ನೊಮ್ಮೆ ಮೆಲಕು ಹಾಕಿದರೆ ಎಷ್ಟು ಚಂದವಿರುತ್ತೆಂಬ ಆಲೋಚನೆಯೊಂದಿಗೆ ಆಯೋಜಿಸಿದ ಗ್ಯಾಸ್ ಲೈಟ್ ಬೆಳಕಿನ ಹುಲಿವೇಷ ಕುಂದಾಪುರ ಮಟ್ಟಿಗೆ ವಿಶೇಷವಾಗಿಯೇ ಮೂಡಿಬಂದಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

ನವರಾತ್ರಿಯ ಎಲ್ಲಾ ವೇಷಗಳ ಪೈಕಿ ವಿಭಿನ್ನ ಮೆರಗು ನೀಡುವ ಹುಲಿವೇಷದ ತಯಾರಿ ಸುಲಭವಾದುದಲ್ಲ. ವ್ಯಕ್ತಿಯ ದೇಹಧಾರ್ಡ್ಯತೆ, ವಾದ್ಯಗೋಷ್ಠಿ ಎಲ್ಲವೂ ಚನ್ನಾಗಿಯೇ ಇರಬೇಕು. ಉತ್ತಮ ತಯಾರಿಯೂ ಬೇಕು. ಬಣ್ಣ ಬಳಿದುಕೊಳ್ಳುವವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿಯೂ ಇರಬೇಕು. ಇಷ್ಟಾದ ಮೇಲೆಯೇ ವಾದ್ಯದ ಲಯಕ್ಕೆ ತಕ್ಕಂತೆ ಕುಣಿದರೆ ಅದೊಂದು ಅದ್ಭುತವಾದ ಕಲಾಸೃಷ್ಠಿಯಾದಂತೆಯೇ ಸರಿ. (ಕುಂದಾಪ್ರ ಡಾಟ್ ಕಾಂ ವರದಿ)

ಯಾರು ಏನೇ ಹೇಳಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹುಲಿವೇಷ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷದಿಂದ ಹುಲಿವೇಷವನ್ನು ಆಯೋಜಿಸುತ್ತಿರುವ ಕಲಾಕ್ಷೇತ್ರ ಈ ಭಾರಿ ಬೈರ್ಡ್ ಹೈಸ್ಕೂಲ್ ಮೈದಾನದಲ್ಲಿ ಹಿಂದಿನ ಕಾಲದ ಗ್ಯಾಸ್‌ಲೈಟಿನಲ್ಲಿ ಹುಲಿವೇಷ ಪ್ರದರ್ಶನ ಏರ್ಪಡಿಸಿದ್ದು ಒಂದು ಸಾರ್ಥಕ ಪ್ರಯತ್ನವೇ ಸರಿ. (ಕುಂದಾಪ್ರ ಡಾಟ್ ಕಾಂ ವರದಿ)

ಕಲಾಕ್ಷೇತ್ರದ ಕಿಶೋರ್ ಕುಮಾರ್ ಅವರೊಂದಿಗೆ ಸಾಧನ ಕಲಾ ಸಂಸ್ಥೆಯ ನಾರಾಯಣ ಐತಾಳ್ ಅವರ ಮುಖವರ್ಣಿಕೆಯನ್ನು ಮಾಡುವ ಮೂಲಕ ಹುಲಿವೇಷದ ಹುಚ್ಚು ತಣಿಸುವ ಕೆಲಸ ಮಾಡಿದ್ದರು.. ಕಲಾಕ್ಷೇತ್ರದ ಕಾರ್ಯದಲ್ಲಿ ಜೊತೆಯಾದ ಹುಲಿವೇಷಧಾರಿಗಳಾದ ಲಕ್ಷ್ಮಣ, ಜಯಪ್ರಕಾಶ ಶೇಖರ, ಪ್ರದೀಪ, ಪ್ರಸನ್ನ ಸಹೋದರರು, ಚಂದದ ಮುಖವರ್ಣಿಕೆ ಮಾಡಿದ ಕಲಾವಿದರು, ಸಹಕರಿಸಿದ ರಾಜೇಶ್ ಕಾವೇರಿ ಹಾಗೂ ಇತರರ ಶ್ರಮವನ್ನು ಮೆಚ್ಚಲೇಬೇಕು. (ಕುಂದಾಪ್ರ ಡಾಟ್ ಕಾಂ ವರದಿ)

Exit mobile version