ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ 12 ವರ್ಷದಿಂದ ಸತತವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವ ಉದ್ಯಮಿ ಹಾಗೂ ಶ್ರೀ ವೆಂಕಟೇಶ್ವರ ಸ್ವೀಟ್ ನ ಮಾಲೀಕ ಪಿ ಲಕ್ಷ್ಮೀ ನಾರಾಯಣ ರಾವ್ ಅವರ ನೇತೃತ್ವದಲ್ಲಿ ಹಾಗೂ ಶ್ರೀಧರ ಪಿ. ಎಸ್. ಅವರ ಮುಂದಾಳತ್ವದಲ್ಲಿ 13ನೇ ವರ್ಷದ ತಿರುಪತಿ ಯಾತ್ರೆ ಆ.22ರಂದು ಸಾಸ್ತಾನದಿಂದ ಹೊರಟಿದೆ.
ಸತತ 18 ದಿನಗಳ ಕಾಲ ಕ್ರಮಿಸಲಿರುವ ತಿರುಪತಿ ಯಾತ್ರೆಯಲ್ಲಿ ಮೊದಲ ದಿನ ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ಉಳಿದು, ಮುಂದೆ ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ ಹೀಗೆ ಒಂದು ಊರಿನಲ್ಲಿ ತಂಗಿ ಕೊನೆಗೆ ತಿರುಪತಿ ತಲುಪುತ್ತಾರೆ. ಅಲ್ಲಿ ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲಾಗುತ್ತದೆ. ಈ ಪಾದಯಾತ್ರೆಯಲ್ಲಿ 200 ಮಂದಿ ಒಟ್ಟಿಗೆ ತೆರಳುತ್ತಿದ್ದಾರೆ. ಪ್ರತಿವರ್ಷ ಸಾಸ್ತಾನ ಮಾತ್ರವಲ್ಲದೇ ಉಡುಪಿ ಉತ್ತರ ಕನ್ನಡ ಜಿಲ್ಲೆಯ ಹಲವು ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮಂಗಳವಾರ 200 ಪಾದಯಾತ್ರಿಗಳು ಪಿ. ಲಕ್ಷ್ಮೀ ನಾರಾಯಣ್ ರಾವ್ ಅವರ ಮನೆಯಲ್ಲಿ, ಅವರಿಂದ ಬಟ್ಟೆಗಳನ್ನು ಸ್ವೀಕರಿಸಿ ಒಟ್ಟಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಯಾತ್ರೆಯ ವೇಳೆಯ ಎಲ್ಲಾ ಖರ್ಚುವೆಚ್ಚವನ್ನು ವೆಂಕಟೇಶ್ವರ ಸ್ವೀಟ್ಸ್ ವತಿಯಿಂದಲೇ ಭರಿಸಲಾಗುತ್ತದೆ.