Kundapra.com ಕುಂದಾಪ್ರ ಡಾಟ್ ಕಾಂ

ಸೃಜನಶೀಲ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು, ರಾಜ್ಯದ 31 ಶಿಕ್ಷಕರ ಪೈಕಿ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಕಲಾ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೋಟ ವಿವೇಕ ಬಾಲಕಿಯರ ಫ್ರೌಡಶಾಲೆಯ ಮೂಲಕ ವೃತ್ತಿ ಬದುಕು ಆರಂಭಿಸಿದ ನರೇಂದ್ರ ಕುಮಾರ್ ಕೋಠ ಅವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ಪಠ್ಯ ಪಠ್ಯೇತರ ಶಿಕ್ಷಣದೊಂದಿಗೆ ಮಕ್ಕಳ ಭೌದ್ದಿಕ ವಿಕಸನಕ್ಕೆ ಸಹಕಾರಿಯಾಗುವ ಹಲವು ಸೃಜನಶೀಲ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಪಠ್ಯೇಟರ ಚಟುವಟಿಕೆಗಳಲ್ಲಿ ಬೇಸಿಗೆ ಶಿಬಿರ, ಪರೀಕ್ಷೆ ಭಯ ಹೊಗಲಾಡಿಸಲು ತರಬೇತಿ, ಪುಸ್ತಕ ಪ್ರಕಟಣೆ ಹೀಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತಲೇ ಬರುತ್ತಿದ್ದಾರೆ.

ರಾಜ್ಯ ಮಟ್ಟದ ತರಬೇತುದಾರರೂ ಆಗಿರುವ ನರೇಂದ್ರ ಕುಮಾರ್ ಅವರು ಹತ್ತಾರು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡಿದ್ದಾರೆ. ಉತ್ತಮ ನಿರೂಪಕರಾಗಿ ಹಲವು ಕಾರ್ಯಕ್ರಮಗಳನ್ನು, ಟಿವಿ ಸಂದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದ ಕೀರ್ತಿ ಇವರದ್ದು. ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಮೂಲಕ ನಡೆಯುವ ಕಾರ್ಯಕ್ರಮದ ಎಲ್ಲಾ ಕಾರ್ಯಕ್ರಮಗಳ ಹಿಂದಿನ ರೂವಾರಿಯಾಗಿ, ಅದೊಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲು ಶ್ರಮಿಸಿದ್ದಾರೆ.

ಲೇಖಕರೂ ಆಗಿರುವ ನರೇಂದ್ರ ಕೋಟ ಅವರು ಈಗಾಗಲೇ 26 ಪುಸ್ತಕಗಳು ಪ್ರಕಟಿಸಿದ್ದಾರೆ. ಹಲವು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಲೇಖನ, ಕಥೆ, ಕನವಗಳು ಪ್ರಕಟಗೊಂಡಿದೆ. ಇತ್ತೀಚಿಗೆ ಅವರು ಸುಗಂಧಿ ಎನ್ನುವ ಚಲನಚಿತ್ರ ನಿರ್ಮಾಣ ಮಾಡಿದ್ದರು.

ನರೇಂದ್ರ ಕುಮಾರ್ ಅವರಿಗೆ 2020-21ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ, ಲೇಖಕರಾಗಿ, ಸಂಘಟಕರಾಗಿ ಸಂಪನ್ಯೂಲ ವ್ಯಕ್ತಿಯಾಗಿ ಬಹು ಆಯಾಮಗಳಲ್ಲಿ ತೊಡಗಿಸಿಕೊಂಡ ಸೃಜನಶೀಲ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರಿಗೆ ಅರ್ಹವಾಗಿ ಪ್ರಶಸ್ತಿ ಸಂದಿದೆ.

Exit mobile version