Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ‌ ಈ ಭಾರಿ ಆಯೋಜಿಸಲಾಗುತ್ತಿರುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪೂರ್ವಭಾವಿ ಸಭೆ ಸೋಮವಾರ ಕಲಾಕ್ಷೇತ್ರ ಕಛೇರಿಯಲ್ಲಿ ಜರುಗಿತು.

ಈ ವೇಳೆ ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿ, ಕುಂದಾಪುರ ಊರು ಚಿಕ್ಕದಿರಬಹುದು ಆದರೆ ಇಲ್ಲಿನವರ ಸಾಧನೆ, ಸಾಧಕರನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕುಂದಾಪುರ ಹಾಗೂ ಕುಂದಾಪುರ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ನಮ್ಮ ಊರು, ಸಂಸ್ಕೃತಿ ಹಾಗೂ ಪರಂಪರೆಯ ನೆನಪಿಸಿಕೊಳ್ಳುವುದು ಬಹುಮುಖ್ಯ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆಚರಣೆ ಅರಂಭಿಸಿದಾಗಿಂದ ಭಾಷೆಯ ಅಭಿಮಾನ ಹೆಚ್ಚಿದೆ ಎಂದರು.

ಸಂಘಟಕ ವಸಂತ್ ಗಿಳಿಯಾರ್ ಮಾತನಾಡಿ, ಕನ್ನಡ ಸಾರಸತ್ವ ಜಗತ್ತಿಗೆ ಮೂಲಭೂಮಿಕೆ ಒದಗಿಸಿದ್ದು ಕುಂದಾಪ್ರ ಕನ್ನಡ. ಕೆಲವರ್ಷದ ಈಚೆಗೆ ಭಾಷೆಗೆ ಬಹುದೊಡ್ಡ ಮೌಲ್ಯ ಕಟ್ಟಿಕೊಡುವ ಕೆಲಸವಾಗುತ್ತಿದೆ. ಇದು ಹೀಗೆಯೇ ಮುಂದುವರಿಯುವುದು ಬಹುಮುಖ್ಯ ಎಂದರು.

ಸಭೆಯಲ್ಲಿದ್ದ ಉದಯ ಶೆಟ್ಟಿ, ಜಾಯ್ ಜೆ. ಕರ್ವೆಲ್ಲೋ ಮಾತನಾಡಿ ಗ್ರಾಮೀಣ ಕ್ರೀಡೆಯ ಮೂಲಕ ಭಾಷೆಯನ್ನು ದುಡಿಸುಕೊಳ್ಳುವುದು ಉತ್ತಮ ಯೋಜನೆ. ಆಸಾಡಿ ಅಮಾಸಿಗೂ 15 ದಿನ ಮೊದಲೇ ಕ್ರೀಡೆ ಆಯೋಜಿಸುವುದು ಮತ್ತು ಎಲ್ಲರೂ ಒಳಗೊಳ್ಳುವ ಕ್ರೀಡೆ ಆಯೋಜಿಸುವುದು ಮುಖ್ಯ ಎಂದು‌ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸನತ್ ಕುಮಾರ್ ರೈ, ಕೆಂಚನೂರು ಸೋಮಶೇಖರ್, ಕುಸುಮಾಕರ ಶೆಟ್ಟಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಗಳ ಆಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂದಾಪುರದ ಗಾಂಧಿ ಮೈದಾನದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ ವ್ಯಾಪ್ತಿಯನ್ನು ಒಳಗೊಂಡು ಕ್ರೀಡಾಕೂಟ ಆಯೋಜಿಸುವ ನಿರ್ಣಯ ಕೈಗೊಳ್ಳಲಾಯಿತು.

Exit mobile version