Kundapra.com ಕುಂದಾಪ್ರ ಡಾಟ್ ಕಾಂ

ಸಿದ್ದಾಪುರ ಹಳ್ಳಿಹೊಳೆ-ಜಡ್ಕಲ್ ರಸ್ತೆ: 60 ಮೀ. ಕಾಮಗಾರಿ ಇನ್ನೂ ಅಪೂರ್ಣ

ಕುಂದಾಪುರ: ಭಾರತ ಸರಕಾರದ ಕೇಂದ್ರೀಯ ರಸ್ತೆ ನಿದಿ ಯೋಜನೆಯಿಂದ 2013-14ನೇ ಸಾಲಿನಲ್ಲಿ ಸಿದ್ದಾಪುರ ಹಳ್ಳಿಹೊಳೆ- ಜಡ್ಕಲ್ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 2 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 7.20 ಕಿ. ಮೀ. ರಸ್ತೆ ಡಾಮರೀಕರಣ ಕಾಮಗಾರಿ ಅನುಷ್ಠಾನಗೊಂಡಿದೆ. ಆದರೆ ಈ ರಸ್ತೆಮಾರ್ಗದ ನಡುವಿನ 60 ಮೀ. ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಡಾಮರೀಕರಣ ಕಾಮಗಾರಿ ನಡೆಸದೇ ಹಾಗೆಯೇ ಬಿಟ್ಟಿದ್ದರಿಂದ ಸಂಚಾರ ದುಸ್ತರಗೊಂಡಿದ್ದಲ್ಲದೇ ಸಾರ್ವಜನಿಕರಲ್ಲಿ ಸುರಕ್ಷತೆಯ ಭೀತಿಯನ್ನು ಹುಟ್ಟುಹಾಕಿದೆ.

ಸಿದ್ದಾಪುರ ಹಳ್ಳಿಹೊಳೆಯಿಂದ ಜಡ್ಕಲ್‌ನ ಸೆಳಕೋಡು ತನಕ ಫೇವರ್ ಫಿನಿಶಿಂಗ್ ಮಾದರಿಯಲ್ಲಿ ಕಾಮಗಾರಿ ನಡೆದಿದ್ದು, ಸೆಳಕೋಡುವಿನಿಂದ ಸ್ವಲ್ಪ ಮುಂದೆ ಇಳಿಜಾರು ಮತ್ತು ತಿರುವಿನಿಂದ ಕೂಡಿದ 60 ಮೀ. ರಸ್ತೆಗೆ ಡಾಮರು ಹಾಕಲಾಗಿಲ್ಲ. ಹೊಂಡಗುಂಡಿಗಳಿಂದ ಕೂಡಿದ್ದು, ಸಂಪೂರ್ಣವಾಗಿ ಹದಗೆಟ್ಟ ಇಲ್ಲಿನ ರಸ್ತೆಗೆ ಡಾಮರು ಹಾಕದೇ ಹೀಗೇಕೆ ಬಿಟ್ಟಿದ್ದೀರಿ ಎಂಬ ಸಾರ್ವಜನಿಕರ ಪ್ರಶ್ನೆಗೆ ಗುತ್ತಿಗೆದಾರರು ಸ್ಪಷ್ಟ ಉತ್ತರ ನೀಡದೇ ಕೇವಲ ಕುಂಟುನೆಪ ಹೇಳುತ್ತಾರೆ. ಕಾಮಗಾರಿ ಅನುಷ್ಠಾನ ಮತ್ತು ಉಸ್ತುವಾರಿ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಭಿಯಂತರರು ಕಾಮಗಾರಿ ಪರಿಶೀಲನೆಗಾಗಿ ಸ್ಥಳಕ್ಕೇ ಬಂದಿಲ್ಲ ಎನ್ನಲಾಗಿದ್ದು, ಕಳಪೆ ಕಾಮಗಾರಿಗೆ ಅದಿಕಾರಿಗಳೇ ರಹದಾರಿ ನೀಡಿದಂತಾಗಿದೆ.

ದೊಡ್ಡ ಮೊತ್ತದ ಅನುದಾನ ಲಭಿಸಿದ್ದರೂ ಸಾಕಷ್ಟು ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳದಿರುವುದು ನಿತ್ಯಸಂಚಾರಿಗಳ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ರಸ್ತೆಯನ್ನು ಸಾಕಷ್ಟು ವಿಸ್ತಾರಗೊಳಿಸದಿರುವುದರಿಂದ ನಿಯಮಿತ ಬಸ್ಸು ಮೊದಲಾದ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಚರಂಡಿ ರಚನೆ, ಮೋರಿ ಅಳವಡಿಕೆ ಮೊದಲಾದ ಕಾರ್ಯಗಳನ್ನು ಸುಸೂತ್ರವಾಗಿ ನಡೆಸದೇ ಅಲ್ಲಲ್ಲಿ ಕಾಟಾಚಾರಕ್ಕೆ ಕಾಮಗಾರಿ ನಡೆಸಲಾಗಿದೆ. ರಸ್ತೆ ಆಸುಪಾಸಿನಲ್ಲಿ ಆಳೆತ್ತರ ಬೆಳೆದು ನಿಂತ ಗಿಡಗಂಟಿಗಳನ್ನು ಸವರುವ ಕಾರ್ಯವೂ ಆಗಿಲ್ಲ ಎಂದು ಜಡ್ಕಲ್ ಗ್ರಾಮಸ್ಥರು ದೂರಿದ್ದಾರೆ.

ಸಿದ್ದಾಪುರ ಹಳ್ಳಿಹೊಳೆ-ಜಡ್ಕಲ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ 3 ವರ್ಷಗಳ ಕಾಲ ನಿರ್ವಹಣೆ ನಡೆಯುತ್ತದೆ. ಈ ಅವದಿಯಲ್ಲಿ ಪೂರ್ಣಗೊಳ್ಳದ ಡಾಮರೀಕರಣ ಕಾಮಗಾರಿಯನ್ನು ಸಂಬಂಧಪಟ್ಟ ಗುತ್ತಿಗೆದಾರರು ನಡೆಸಬೇಕು. ಅದಾಗದಿದ್ದಲ್ಲಿ ರಸ್ತೆ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಬರುತ್ತಲೇ ಹದಗೆಟ್ಟ ರಸ್ತೆಗೆ ಡಾಮರು ಹಾಕಲು ಇಲಾಖಾ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

Exit mobile version