Kundapra.com ಕುಂದಾಪ್ರ ಡಾಟ್ ಕಾಂ

ಸೋಮೇಶ್ವರ ಗುಡ್ಡ ಜರಿತ: ದೊಂಬೆ – ಪಡುವರಿ ಮಾರ್ಗ ಸಂಚಾರ, ದೇಗುಲದ ಆವರಣಕ್ಕೆ ಆಪತ್ತು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.17:
ಖಾಸಗಿ ರೆಸಾರ್ಟ್‌ನ ದಾರಿಗಾಗಿ ಸೋಮೇಶ್ವರದ ಗುಡ್ಡದ ಮೇಲೆ ರಸ್ತೆ ನಿರ್ಮಿಸುತ್ತಿರುವುದರಿಂದ, ಗುಡ್ಡ ಜರಿತ ಉಂಟಾಗಿದ್ದು ದೊಂಬೆ ಮಾರ್ಗದ ಸಂಚಾರ ಹಾಗೂ ಸೋಮೇಶ್ವರ ದೇಗುಲದ ಆವರಣಕ್ಕೆ ಆಪತ್ತು ತಂದೊಡ್ಡಿದೆ.

ಬೈಂದೂರು ಫಾರೆಸ್ಟ್ ಐಬಿಗೆ ತಾಕಿಕೊಂಡಿರುವ ಖಾಸಗಿ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದ್ದು, ಅದಕ್ಕೆ ನೇರ ರಸ್ತೆ ನಿರ್ಮಿಸುವ ಉದ್ದೇಶದಿಂದ ಬೈಂದೂರು ಪಡುವರಿಯಿಂದ ದೊಂಬೆಗೆ ತೆರಳುವ ಮಾರ್ಗದ ಬಲಭಾಗದಲ್ಲಿ ಗುಡ್ಡಕ್ಕೆ ಅಡ್ಡಲಾಗಿ ಖಾಸಗಿ ರಸ್ತೆ ನಿರ್ಮಿಸಲಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಈ ಕಾಮಗಾರಿ ಪ್ರಗತಿಯಲ್ಲಿದ್ದು, ರಿವಿಟ್‌ಮೆಂಟ್ ಕಟ್ಟಿ ರಸ್ತೆ ನಿರ್ಮಾಣ ಕಾಮಗಾರಿ ಮುಂದುವರಿಸಲಾಗಿತ್ತು. ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಗುಡ್ಡ ಸಂಪೂರ್ಣ ಜರಿದಿದ್ದು, ಮೇಲ್ಭಾಗದ ರೆಸಾರ್ಟ್ ಸಹಿತ ಕುಸಿದು ಬೀಳುವ ಸಾಧ್ಯತೆ ಇದೆ.

ದೊಂಬೆ ಭಾಗದ ಸಾರ್ವಜನಿಕರ ಪ್ರಮುಖ ಸಂಪರ್ಕ ಮಾರ್ಗದ ಬಲಭಾಗದಲ್ಲಿಯೇ ಗುಡ್ಡ ಕುಸಿತ ಉಂಟಾಗಿರುವುದರಿಂದ ದಾರಿಯನ್ನು ಹಾದುಹೋಗುವವರಿಗೆ ಪ್ರಾಣಭೀತಿ ಎದುರಾಗಿದೆ. ಶಾಲಾ ವಾಹನಗಳು, ಸರಕಾರಿ ಬಸ್ ಸಹಿತ ನೂರಾರು ವಾಹನಗಳು, ಪಾದಾಚಾರಿಗಳು ನಿತ್ಯವೂ ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ.

ಸಾರ್ವಜನಿಕರ ಆಕ್ಷೇಪ, ದೊಂಬೆ ರಸ್ತೆ ಬಂದ್:
ಗುಡ್ಡ ಕಡಿದು ರಸ್ತೆ ನಿರ್ಮಿಸುವುದು ಅಪಾಯಕಾರಿ ನಿರ್ಧಾರವೆಂದು ಸ್ಥಳೀಯರು ಪಟ್ಟಣ ಪಂಚಾಯತಿಗೆ ಹಲವು ಭಾರಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸದಿರುವುದು ಬೆಳಕಿಗೆ ಬಂದಿದೆ. ಪಟ್ಟಣ ಪಂಚಾಯತ್‌ ಮೌನ ವಹಿಸಿರುವುದೇ ಅಪಾಯಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಸೇಡಿಮಣ್ಣಿನಿಂದ ಕೂಡಿದ ಗುಡ್ಡ ಜರಿಯುವ ಬಗ್ಗೆ ಒತ್ತಿನಣೆಯಲ್ಲಿ ನಡೆದ ಘಟನೆಗಳೇ ಸಾಕ್ಷಿಯಾಗಿದ್ದು, ಆ ಬಳಿಕವೂ ಅವೈಜ್ಞಾನಿಕ ಕಾಮಗಾರಿಗೆ ಅವಕಾಶ ನೀಡಿದ್ದಾದರೂ ಹೇಗೆ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಕಾಟಾಚಾರಕ್ಕೆ ದೊಂಬೆ ರಸ್ತೆ ಬಂದ್ ಮಾಡಲಾಗಿದೆ. ಬೈಂದೂರು ತೆರಳಲು ಸುತ್ತುವರಿದು ಬರಬೇಕಾಗಿರುವುದರಿಂದ ಸಾರ್ವಜನಿಕರು ರಸ್ತೆ ಬಂದ್‌ ಮಾಡುವ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಗುಲದ ಆವರಣಕ್ಕೂ ಆಪತ್ತು:
ಸೋಮೇಶ್ವರ ಗುಡ್ಡ ಜರಿತ ಮುಂದುವರಿದರೆ ಸೋಮೇಶ್ವರ ದೇಗುಲದ ಆವರಣಕ್ಕೂ ಆಪತ್ತು ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ದೊಂಬೆಯಲ್ಲಿ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಖಾಸಗಿ ರೆಸಾರ್ಟ್‌ನ ಮುಂದುವರಿದ ಯೋಜನೆಯಾಗಿ ವತ್ತಿನಣೆಯ ಖಾಸಗಿ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲಾಗಿತ್ತು. ಆದರೆ ಸೋಮೇಶ್ವರದಿಂದ ರಸ್ತೆ ನಿರ್ಮಿಸುವ ಯೋಜನೆ ಇದೀಗ ಸಾರ್ವಜನಿಕರಿಗೆ ಆಪತ್ತು ತಂದೊಡ್ಡಿದೆ.

ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಬುಧವಾರ ಪಟ್ಟಣ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

* ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.‌ ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಅದಕ್ಕೆ ಜವಾಬ್ದಾರರು. ತಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು. ಗುಡ್ಡ ಜರಿದು ರಸ್ತೆ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಈ ಹಿಂದೆಯೇ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ ಕಾಮಗಾರಿಗೆ ಸಂಬಂಧಪಟ್ಟವರು ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು. – ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು

Exit mobile version