ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿರಂತರ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಶನಿವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಭೇಟಿ ನೀಡಿದರು.
ಜಿಲ್ಲೆಯಲ್ಲಿ ಈ ಭಾರಿ ಅಧಿಕ ಮಳೆಯಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿಯೂ ಹೆಚ್ಚಿನ ಮಳೆ ಸುರಿದಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಂಬೆ ಸಮೀಪದ ಸೋಮೇಶ್ವರದ ಶೇಡಿಗುಡ್ಡ ಜರಿತಗೊಂಡಿದ್ದು, ಮತ್ತಷ್ಟು ಹಾನಿಯ ಸೂಚನೆ ಇದೆ. ಈ ಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜೆಡಿಮಣ್ಣು ನೀರಿನೊಂದಿಗೆ ಬೆರೆತು ಕುಸಿಯುವ ಸಂಭವ ಜಾಸ್ತಿ ಇರುವುದರಿಂದ ಅಧಿಕ ಜರಿತ ಇರುವ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಟಾರ್ಪಾಲ್ ಮುಚ್ಚಿ ಮೇಲಿನ ನೀರು ಜಾರಿಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು. ಮಳೆಗಾಲದ ಬಳಿಕ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, ಗುಡ್ಡ ಕಡಿದು ರಸ್ತೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಕಾನೂನು ಮೀರಿದ್ದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಒತ್ತಿನಣೆ ಪ್ರದೇಶದಲ್ಲಿರುವ ಕಸ ವಿಲೇವಾರಿ ಪ್ರದೇಶ, ಹೇನಬೇರು ತೆರಳುವ ರಸ್ತೆ, ದೊಂಬೆ ಪ್ರದೇಶದಲ್ಲಿ ಉಂಟಾಗಿರುವ ಕಡಲಕೊರೆತ ಮೊದಲಾದೆಡೆ ಭೇಟಿ ನೀಡಿ ಸಾರ್ವಜನಿಕರಿಂದ ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ತಹಶೀಲ್ದಾರ್ ಪ್ರದೀಪ್ ಆರ್., ವೃತ್ತ ನಿರೀಕ್ಷಕ ಸವಿತ್ರತೇಜ್, ಕಂದಾಯ ಇಲಾಖೆಯ ನಿರೀಕ್ಷಕ ದೀಪಕ್ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಬೈಂದೂರು ಶಾಸಕ, ಮಾಜಿ ಶಾಸಕರ ಭೇಟಿ:
ಸೋಮೇಶ್ವರದ ಶೇಡಿಗುಡ್ಡ ಜರಿತ ಪ್ರದೇಶಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಪ್ರತ್ಯೇಕ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡರು.