Kundapra.com ಕುಂದಾಪ್ರ ಡಾಟ್ ಕಾಂ

ಸಾಧಿಸುವ ಛಲವಿದ್ದರೆ ಸಾಧನೆಯ ದಾರಿ ಸುಲಭ: ಆನಂದ್ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಬದುಕು ನಿಂತ ನೀರಾಗಿರದೇ ಸಾಧಿಸುವ ಛಲವಿರಬೇಕು ಜೊತೆಗೆ ಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳು ಹತ್ತಲು ಸುಲಭವಾಗುತ್ತದೆ. ಯುವಕರು ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯ ಚಟುವಟಿಕೆಗಳಿಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಬೇಕು ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅವರು ಹೇಳಿದರು.

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಉಡುಪಿ ಡಾ. ಶಿವರಾಮ ಕಾರಂತ ಟ್ರಸ್ಟ್ ರಿ., ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಚಿತ್ರನಟ ಡಾ. ರಮೇಶ್ ಅರವಿಂದ್ ಪ್ರಾಯೋಜಿತ ದತ್ತಿ ಪುರಸ್ಕಾರವನ್ನು ಪ್ರಥ್ವೀಶ್ ಭಟ್ ಹಾಗೂ ರವೀಂದ್ರ ಶೆಟ್ಟಿ ತಂತ್ರಾಡಿ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್, ಯಕ್ಷಗಾನ ಪ್ರಸಂಗಕರ್ತ ವಿಷ್ಣುಮೂರ್ತಿ ನಾಯಕ್ ಬೇಳೂರು, ಗೋವಿಗಾಗಿ ಮೇವು ಅಭಿಯಾನ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬ್ರಹ್ಮ ನಾರಾಯಣಗುರು ಸೇವಾ ಸಂಘ ರಿ. ಕೋಟ ಅಧ್ಯಕ್ಷ ಸದಾನಂದ ಜಿ, ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಗುತ್ತಿಗೆದಾರ ಸುರೇಶ್ ಗಾಣಿಗ ಶೇವಧಿ, ಉದ್ಯಮಿ ಕಿರಣ್ ತೆಕ್ಕಟ್ಟೆ, ಬಾಳೆಬೆಟ್ಟು ಫ್ರೆಂಡ್ಸ್ ರಿ., ಬಾಳೆಬೆಟ್ಟು ಅಧ್ಯಕ್ಷ ರತ್ನಾಕರ ಪೂಜಾರಿ, ಯಕ್ಷಸುಮನಸ ಕಲಾರಂಗದ ಅಧ್ಯಕ್ಷ ಪ್ರಸಾದ್ ಬಿಲ್ಲವ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್ ವಂದಿಸಿದರು. 

Exit mobile version