ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಶಿಥಿಲಾವಸ್ಥೆ ತಲುಪಿದ ಮನೆ. ಅನಾರೋಗ್ಯದಿಂದ ದಣಿದು ಕುಳಿತ ದುಡಿಯುವ ಕೈಗಳು. ವಯಸ್ಸಾದ ತಾಯಿ. ಇದರ ನಡುವೆಯೇ ಮೂವರು ಹೆಣ್ಣು ಮಕ್ಕಳು ಮತ್ತು ಏಳು ಮಂದಿ ಶಾಲೆಗೆ ತೆರಳುವ ಮಕ್ಕಳು ನಿತ್ಯವೂ ಆತಂಕದ ಬದುಕು ಸಾಗಿಸುತ್ತಿದ್ದಾರೆ. ಇದು ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಕುರ್ಕುಂಡಿ ಗುಡ್ಡೆಮನೆ ಮರ್ಲಿ ಪೂಜಾರ್ತಿ ಕುಟುಂಬದ ಕರುಣಾಜನಕ ಕಥೆ.
ಕುರ್ಕುಂಡಿಯಲ್ಲಿ ವಾಸವಿರುವ ಗುಡ್ಡಿಮನೆ ಕುಟುಂಬ ಸುಮಾರು 40 ವರ್ಷದ ಹಿಂದೆ ಕಟ್ಟಿದ ಮನೆ ಇದೀಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಮಣ್ಣಿನ ಗೋಡೆಗಳು ಬಿರುಕು ಬಿಟ್ಟಿದ್ದು, ಗಾಳಿ ಮಳೆಗೆ ಮೇಲ್ಛಾವಣಿಯ ಹಂಚುಗಳು ಹಾರಿಹೋಗಿವೆ. ರೀಪು – ಪಕಾಸುಗಳು ಗೆದ್ದಿಲು ಹಿಡಿದಿದ್ದು ಯಾವುದೇ ಸಂದರ್ಭದಲ್ಲಿ ಮನೆ ಧರಾಶಾಹಿಯಾಗುವ ಆತಂಕ ಎದುರಾಗಿದೆ. ಆಗಲೋ ಇಗಲೋ ಎನ್ನುವಂತಿರುವ ಮನೆಯಲ್ಲಿಯೇ ಇರುವ ವಯೋವೃದ್ಧ ತಾಯಿ, ಹಾಸಿಗೆ ಹಿಡಿದ ಅಳಿಯ ಹಾಗೂ ಏಳು ಮಕ್ಕಳು ಆತಂಕದಲ್ಲಿಯೇ ಕಾಲಕಳೆಯಬೇಕಾದ ಪರಿಸ್ಥಿತಿ ಇದೆ. ಅವರಿಗೆ ಉಳಿಯಲು ಬೆರೆಡೆಯೂ ಸೂಕ್ತವಾದ ಸ್ಥಳವಿಲ್ಲ. ಒಂದು ವೇಳೆ ರಾತ್ರಿ ವೇಳೆಯಲ್ಲಿ ಮನೆ ಧರಾಶಾಹಿಯಾದರೆ ಅಪಾಯ ಖಚಿತ. 7 ಮಂದಿ ಮಕ್ಕಳು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ಧರೊಂದಿಗೆ ಎಲ್ಲಿ ವಾಸಿಸುವುದು ಎಂಬ ಚಿಂತ ಕುಟುಂಬವನ್ನು ಕಾಡುತ್ತಿದೆ.
ಕಷ್ಟದಲ್ಲಿ ಬೆಂದ ಕುಟುಂಬ:
ಮರ್ಲಿ ಪೂಜಾರ್ತಿ ಅವರಿಗೆ ಮೂವರು ಹೆಣ್ಣುಮಕ್ಕಳು. ಮೂವರಿಗೂ ಮದುವೆಯಾಗಿದೆ. ಈ ಮೂವರು ಹೆಣ್ಣುಮಕ್ಕಳಿಗೆ 7 ಮಂದಿ ಮಕ್ಕಳಿದ್ದು ವಿವಿಧ ತರಗತಿಗಳಲ್ಲಿ ಓದುತ್ತಿದ್ದಾರೆ. ಮನೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಯಜಮಾನ ಜಟ್ಟ ಪೂಜಾರಿ ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರಿಂದ ಕುಟುಂಬದ ಆಧಾರಸ್ತಂಭವೇ ಕುಸಿದಂತಾಗಿದೆ. ಜಟ್ಟ ಅವರ ಸಹೋದರಿ ಮರ್ಲಿ ಪೂಜಾರ್ತಿ ಅವರ ಪತಿ ಮರ್ಲ ಪೂಜಾರಿ ಅವರೂ ಮೂರು ವರ್ಷದ ಹಿಂದೆ ಮೃತಪಟ್ಟಿದ್ದರು. ಹೊರಗಡೆ ದುಡಿಮೆ ಮಾಡಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದ ಓರ್ವ ಮಗಳ ಗಂಡ ಉಮೇಶ್ ಪೂಜಾರಿ ಅವರು ಮರದಿಂದ ಕೆಳಕ್ಕೆ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡು ನಡೆದಾಡಲು ಸಾಧ್ಯವಾಗದ ಹಾಸಿಗೆ ಹಿಡಿದಿದ್ದು, ಸದ್ಯ ವೀಲ್ ಚೇರ್ ಆಶ್ರಯಿಸಿದ್ದಾರೆ. ಈ ಕುಟುಂಬಕ್ಕೀಗ ಮನೆ ದುರಸ್ತಿ ಮಾಡಿಕೊಳ್ಳುವುದಿರಲಿ, ಪ್ರತಿ ತಿಂಗಳ ಚಿಕಿತ್ಸಾ ವೆಚ್ಚ, ಕುಟುಂಬ ನಿರ್ವಹಣೆಗೂ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಕುಟುಂಬಕ್ಕೆ ಸೇರಿದ ಸ್ಪಲ್ಪ ಗದ್ದೆಯನ್ನೇ ಕೃಷಿಗಾಗಿ ನೆಚ್ಚಿಕೊಳ್ಳಲಾಗಿದೆ.
* ಬಸವ ವಸತಿ ಕಲ್ಯಾಣ ಯೋಜನೆಯಿಂದ ಕಳೆದ 3 ವರ್ಷದಿಂದ ಒಂದೂ ಮನೆ ಮಂಜೂರಾಗಿಲ್ಲ. ಕುಟುಂಬದ ಪರಿಸ್ಥಿತಿ ಕಂಡಾಗ ವ್ಯಥೆಯಾಗುತ್ತದೆ. ಸಂಪೂರ್ಣ ದುಸ್ತರವಾಗಿರುವ ಈ ಮನೆಗೆ ಜಿಲ್ಲಾಡಳಿತ ಗರಿಷ್ಠ ಪರಿಹಾರ ನೀಡಿ ಕುಟುಂಬದ ಕಣ್ಣೊರೆಸುವ ಕೆಲಸ ಮಾಡಲಿ. ನಮ್ಮ ಪಂಚಾಯತಿಯಿಂದಲೂ ಅಗತ್ಯ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು. ದಾನಿಗಳು ಮುಂದೆ ಬಂದು ಈ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. – ಅಣ್ಣಪ್ಪ ಶೆಟ್ಟಿ, ಅಧ್ಯಕ್ಷರು, ಕಾಲ್ತೋಡು ಗ್ರಾಮ ಪಂಚಾಯತ್
* ನಾನು ಅಸಂಘಟಿತ ಕಟ್ಟಡ ಕಾರ್ಮಿಕನಾಗಿದ್ದು ಕಳೆದ ನಾಲ್ಕು ವರ್ಷದ ಹಿಂದೆ ಆಕಸ್ಮಿಕವಾಗಿ ಮರದಿಂದ ಬಿದ್ದು ಹಾಸಿಗೆ ಹಿಡಿದಿದ್ದೇನೆ. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ಹಣವನ್ನು ಸಾಲಮಾಡಿ ಭರಿಸಲಾಗಿದೆ. ಆದರೆ ಕಾರ್ಮಿಕ ಇಲಾಖೆ ಈವರೆಗೆ ಚಿಕ್ಕಾಸು ಪರಿಹಾರ ನೀಡಿಲ್ಲ. ನನ್ನ ಇಬ್ಬರು ಹೆಣ್ಣುಮಕ್ಕಳಿಗೂ ವಿದ್ಯಾರ್ಥಿ ವೇತನ, ಯಾವುದೇ ಕಿಟ್ ಒದಗಿಸಿಲ್ಲ. ನಮ್ಮ ಕುಟುಂಬ ತುಂಬಾ ಸಂಕಷ್ಟದಲ್ಲಿದ್ದು, ಮನೆಯೂ ಬೀಳುವ ಹಂತದಲ್ಲಿರುವುದರಿಂದ ದಿಕ್ಕೆ ತೋಚದಂತಾಗಿದೆ. – ಉಮೇಶ್ ಪೂಜಾರಿ, ಸಂತೃಸ್ಥ