Kundapra.com ಕುಂದಾಪ್ರ ಡಾಟ್ ಕಾಂ

ಅಂತರಾಷ್ಟ್ರೀಯ ಬೃಹತ್ ಉದ್ಯೋಗ ಮೇಳ ಉದ್ಘಾಟನೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕೇಂದ್ರ ಸರ್ಕಾರವು ದೇಶದ ಯುವಶಕ್ತಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ಸುಮಾರು 2ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಿದೆ, ಅದರಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯುವಕ ಯುವತಿಯರು ಅದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉನ್ನತ ಉದ್ಯೋಗ ಪಡೆಯಲು ಮುಂದಾಗಬೇಕು ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ಶನಿವಾರ ಸಮೃದ್ಧ ಬೈಂದೂರು ಆಶ್ರಯದಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ ಹಾಗೂ ಆಜಿನೋರಾಹ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಅಂತರಾಷ್ಟ್ರೀಯ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ.75ರಷ್ಟು ಜನರು ಕೃಷಿಯಾಧಾರಿತ ಉದ್ಯೋಗ ನಡೆಸುತಿದ್ದರೇ, ಕೇವಲ ಶೇ.03ರಷ್ಟು ಜನರಿಗೆ ಮಾತ್ರ ಸರ್ಕಾರ ಉದ್ಯೋಗ ನೀಡುತ್ತಿದೆ, ಇನ್ನುಳಿದ ಶೇ.22ರಷ್ಟು ಜನರು ಖಾಸಗಿ ವಲಯದಲ್ಲಿ ಉದ್ಯೋಗವನ್ನು ಅವಲಂಬಿಸಿದ್ದಾರೆ. ಇಂತಹ ಯುವಶಕ್ತಿಗೆ ಕೌಶಲ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಯುವಕರು ಸರ್ಕಾರಿ ಉದ್ಯೋಗಕ್ಕೆ ಕಾಯದೇ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಖಾಸಗಿ ವಲಯದಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಬೈಂದೂರು ಅಭಿವೃದ್ಧಿಯೆಡೆಗೆ ದಾಪುಗಾಲಿಡುತ್ತಿದ್ದು, ಇಲ್ಲಿನ ವತ್ತಿನೆಣೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ, ಮುಂದಿನ ದಿನಗಳಲ್ಲಿ ಕೊಡಚಾದ್ರಿ ರೋಪ್‌ವೇ, ಇಲ್ಲಿನ ಬೀಚ್‌ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಇನ್ನಷ್ಟು ಬಲಪಡಿಸುವ ಮೂಲಕ ಮಾದರಿ ಕ್ಷೇತ್ರವಾಗಿ ರೂಪಿಸಲಾಗುವುದು ಎಂದರು.

ಇದನ್ನೂ ಓದಿ ► ವಿದ್ಯಾವಂತರಿಗೆ ವಿದೇಶಗಳಲ್ಲಿ ಉದ್ಯೋಗ ದೊರಕಿಸಲು ಸಮೃದ್ಧ ಬೈಂದೂರು ಸೇತುವೆ: ಶಾಸಕ ಗುರುರಾಜ ಗಂಟಿಹೊಳೆ – https://kundapraa.com/?p=75925 .

ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಸ್ಕಿಲ್ ಡೆವಲಫ್‌ಮೆಂಟ್ ಕಾರ್ಫೋರೇಷನ್ ಪಾರ್ಟ್ನರ್ ಸುರೇಜ್ ಘೋಷ್. ಸಂಸ್ಥೆಯ ಪಾಲುದಾರ ಸುಬೇಚಾ ಗೋಷ್, ಎಲ್‌ಐಸಿ ಜಪಾನ್ ಜನರಲ್ ಮ್ಯಾನೇಜರ್ ಇಮಿಲ್ ನಾಯ್ ಹಾಂಗ್‌ಲೆ, ಟೋಕಿಯೋ ಸ್ಟೇಟ್ ಬ್ಯಾಂಕ್ ಕಾರ್ಪೊರೇಷನ್ ಜನರಲ್ ಮ್ಯಾನೇಜರ್ ಸೆಚಿ ಕಿಡಾಚಿ, ವೋಯೆಜ್ ಗ್ರೂಪ್ ಜರ್ಮನಿ ಮ್ಯಾನೇಜಿಂಗ್ ಡೈರೆಕ್ಟರ್ ರೋನಿ, ಆಜಿನೋರಾಹ್ ಕಂಪನಿ ಮಾರ್ಕೆಟಿಂಗ್ ಡೈರೆಕ್ಟರ್ ಅಜಿ ಅಸ್ಟಿನ್, ನಿರ್ದೇಶಕ ಸೇತುರಾಮ್ ನಾಯರ್, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಉಪಸ್ಥಿತರಿದ್ದರು.

ಸಮೃದ್ಧ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ ಪ್ರಾಸ್ತಾವಿಸಿದರು. ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿಯ ಆಡಳಿತ ನಿರ್ದೇಶಕ ಸತ್ಯನಾರಾಯಣ ಗಾಣಿಗ ಸ್ವಾಗತಿಸಿದರು, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ, ಪುಷ್ಪರಾಜ ಶೆಟ್ಟಿ ವಂದಿಸಿದರು. ಬೆಳಿಗಿನಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೇ ಸುಮಾರು 8 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.

Exit mobile version