Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ| ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಸಾಹಿತಿ ಪ್ರೊ. ಕೃಷ್ಣೆಗೌಡ ಮೈಸೂರು ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕೋಟತಟ್ಟು ಗ್ರಾಮ ಪಂಚಾಯತ್ ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟದ ಸಹಭಾಗಿತ್ವದಲ್ಲಿ ಕೊಡಮಾಡುವ 2024ನೇ ಡಾ| ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಸಾಹಿತಿ ಪ್ರೊ. ಕೃಷ್ಣೆಗೌಡ ಮೈಸೂರು ಆಯ್ಕೆಯಾಗಿದ್ದಾರೆ.

ಕಳೆದ ಹತ್ತೊಂಭತ್ತು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪುರಸ್ಕಾರಕ್ಕೆ ನೀಡುತ್ತಾ ಬಂದಿದ್ದು ವೀರಪ್ಪ ಮೊಯ್ಲಿ, ಶ್ರೀ ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ.ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ, ಗಿರೀಶ್ ಭಾರದ್ವಜ್, ರಮೇಶ್ ಅರವಿಂದ್, ಡಾ. ವಿದ್ಯಾಭೂಷಣ್ ಅವರು  ಪುರಸ್ಕಾರಕ್ಕೆ ಭಾಜನರಾಗಿದ್ದರು.

ಹಲವು ದಶಕಗಳಿಂದ ಯುವ ಜನಾಂಗಕ್ಕೆ ಪ್ರೇರಣಾತ್ಮಕ ಮಾತುಗಳಿಂದ ಭರವಸೆ ತುಂಬಿ ಹೊಸದೆಸೆಯ ಬೆಳಕಾಗಿರುವ, ಕನ್ನಡ ಮಾತುಗಾರಿಕೆಗೆ ಹೊಸ ನೆಲೆಕಟ್ಟು ಮತು ಚೌಕಟ್ಟು ನೀಡಿದ  ಅಮೂಲ್ಯ ಸೇವೆಯನ್ನು ಹಾಗೂ ಅವರು ಏರಿದ ಸಾಧನೆಯ ಮೆಟ್ಟಿಲುಗಳನ್ನು ಪರಿಗಣಿಸಿ  ಈ ವರ್ಷ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ ಹತ್ತರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನ ಡಾ. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್,  ಆಯ್ಕೆ ಸಮಿತಿ ಸದಸ್ಯ ಯು.ಎಸ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪಿ.ಡಿ.ಓ ರವೀಂದ್ರ ರಾವ್ , ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

Exit mobile version