Site icon Kundapra.com ಕುಂದಾಪ್ರ ಡಾಟ್ ಕಾಂ

ಅ.4ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು,ಅ.01
: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಸೋಮವಾರದ(ಸೆ.30) ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದ ಹೈಕೋರ್ಟ್, ನಿನ್ನೆಯ ಕಲಾಪದಲ್ಲಿ ಅರ್ಜಿದಾರರು ಸಲ್ಲಿಸಿದ ವಿಷಯಗಳಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿದೆ. ಈ ಮೂಲಕ ನೂತನ ವ್ಯವಸ್ಥಾಪನಾ ಸಮಿತಿ ಸಭೆ ಹಾಗೂ ಅಧ್ಯಕ್ಷರ ಆಯ್ಕೆಗಿದ್ದ ಆತಂಕ ನಿವಾರಣೆಯಾಗಿದೆ.

ಹೈಕೋರ್ಟ್ ತಡೆ ನಿವಾರಣೆಯಾದ ಹಿನ್ನೆಲೆಯಲ್ಲಿ ಅಕ್ಟೋಬರ್ 04ರ ಬೆಳಿಗ್ಗೆ ದೇಗುಲದಲ್ಲಿ ಬೆಳಿಗ್ಗೆ ಸಭೆ ಕರೆಯಲಾಗಿದ್ದು,‌ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಸೆ.20ರಂದು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು 9 ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದರು. ಆದರೆ ಸೆ.19ರಿಂದ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅಲ್ಲದೇ ಓರ್ವ ಸದಸ್ಯರ ವಿರುದ್ದ ಅಪರಾಧ ಪ್ರಕರಣ ದಾಖಲಾಗಿದೆ. ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂಬ ವಾದವನ್ನು ಹೈಕೋರ್ಟಿನಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಸರಕಾರದ ಆದೇಶ ಸೋಮವಾರದ ತನಕ ಜಾರಿಗೊಳಿಸದಂತೆ ನಿರ್ದೇಶನ ನೀಡಿದ್ದ ಹೈಕೋರ್ಟ್, ಸೋಮವಾರ ನಡೆದ ಕಲಾಪದಲ್ಲಿ ಅರ್ಜಿದಾರರ ತಿಳಿಸಲಾಗಿರುವ 3 ಅಂಶಗಳ ಆಧಾರದ ಮೇಲೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಯಿತು.

ವ್ಯವಸ್ಥಾಪನಾ ಸಮಿತಿ ಆಯ್ಕೆಯ ವಿರುದ್ದ ಚಂದ್ರಶೇಖರ ರೆಡ್ಡಿ ಬೆಂಗಳೂರು, ರವೀಶ್‌ ಕುಮಾರ್‌ ನಿಟ್ಟೂರು, ಎ.ಎಲ್.‌ ಲಕ್ಷ್ಮೀಶ್‌ ನಿಟ್ಟೂರು ಎಂಬುವವರು ರಿಟ್‌ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ ► ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ನೂತನ ವ್ಯವಸ್ಥಾಪನಾ ಸಮಿತಿ ಆದೇಶ ಅನುಷ್ಠಾನಕ್ಕೆ ತಡೆ – https://kundapraa.com/?p=77219 .

Exit mobile version