ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳಿಗೆ ಬದುಕಿಗೆ ಬಹುಮುಖ್ಯ ಅಂಗವಾಗಿರುವ ಸಂಸ್ಕಾರಯುತ ಶಿಕ್ಷಣ ಮನೆಯಲ್ಲಿಯೇ ಆರಂಭವಾಗಬೇಕು. ಮಾನವೀಯತೆಗೆ ಮಿಡಿಯುವ ಮನಸ್ಸುಗಳು ಕಡಿಮೆಯಾಗುತ್ತಿರುವುದು ದುರದೃಷ್ಠಕರ ಸಂಗತಿ. ನೋವಿಗೆ ಸ್ಪಂದಿಸುವ ಪ್ರವೃತ್ತಿ ಎಲ್ಲ ಕಾರ್ಯಗಳಿಗಿಂತ ಶ್ರೇಷ್ಠವಾದುದು ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಹೇಳಿದರು.
ಅವರು ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ ಯಡ್ತಾಡಿ ಇವರ ಆಶ್ರಯದಲ್ಲಿ ನಡೆದ 13 ನೇ ವರ್ಷದ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-2024 ( ಭಾವ ಭಕ್ತಿಯ ಸಂಗಮ) ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಿನಾಯಕ ಯುವಕ ಮಂಡಲ ವಿಶಿಷ್ಟ ಕಾರ್ಯಕ್ರಮಗಳ ಆಯೋಜನೆ ಮೂಲಕ ಯುವಕ ಮಂಡಲದ ಸ್ಥಾಪನೆಯ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದೆ. ವಿಶು ಶೆಟ್ಟಿ ಯುವ ಜನಾಂಗಕ್ಕೆ ಮಾದರಿ ಎಂದರು.
ವಿದ್ವಾನ್ ಟಿ, ವಾಸುದೇವ ಜೋಯಿಷ್, ತಟ್ಟುವಟ್ಟು ಆಶೀರ್ವಚನ ಮಾತುಗಳನ್ನಾಡಿ ಭವ್ಯ ಭಾರತದಲ್ಲಿ ನಮ್ಮ ಜನ್ಮ ಶ್ರೇಷ್ಠವಾದುದು, ಯುವಜನಾಂಗವೇ ಹೆಚ್ಚಿರುವ ನಮ್ಮ ದೇಶದಲ್ಲಿ ಯುವಕರು ತಮ್ಮ ಬದುಕನ್ನು ಭವ್ಯ ಭಾರತದ ಕನಸು ಕಂಡು ನನಸಾಗುವಂತೆ ಶ್ರಮಿಸಬೇಕು, ಹಿಂದೂ ಧರ್ಮದ ಆಚರಣೆ ಸಂಸ್ಕೃತಿಗಳ ಮಹತ್ವ ಎಳವೇಯಲ್ಲಿಯೇ ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಅಮೃತ್ ಪೂಜಾರಿ ವಹಿಸಿದ್ದರು.
ಈ ವೇಳೆ ನಿವೃತ್ತ ಯೋಧ ಗಣೇಶ್ ಶೆಟ್ಟಿ, ಗ್ರಾಮೀಣ ಕ್ರೀಡಾ ಪಟು ಕಿರಣ್ ದೇವಾಡಿಗ ಹಾಗೂ ಶಿವದೂತ ಗುಳಿಗ ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್ ಬೈಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಸಾಬ್ರಕಟ್ಟೆಅಧ್ಯಕ್ಷ ಪ್ರದೀಪ್ ಬಲ್ಲಾಳ್, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಬಾರ್ಕೂರು ಅಧ್ಯಕ್ಷ ಸುಬ್ರಹ್ಮಣ್ಯ ಎನ್. ಪೂಜಾರಿ, ಉದ್ಯಮಿ ಶರತ್ ಕುಮಾರ್ ಶೆಟ್ಟಿ, ಯುವಕ ಮಂಡಲದ ಕಾರ್ಯದರ್ಶಿ ಗಿರೀಶ್ ನಾಯ್ಕ ಉಪಸ್ಥಿತರಿದ್ದರು.

