ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಸಕ್ತಿಯನ್ನೇ ಶಕ್ತಿಯನ್ನಾಗಿಸಿ ತೊಡಗಿಸಿಕೊಂಡು ಉಪ್ಪಿನಕುದ್ರು ಊರಿನ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ತಂದುಕೊಟ್ಟ ಕೀರ್ತಿ ಯಕ್ಷಗಾನ ಗೊಂಬೆಯಾಟ ಅಕಾಡೆಮಿಗೆ ಸಲ್ಲುತ್ತದೆ ಎಂದು ಸಾಲಿಗ್ರಾಮ ಯಕ್ಷಗಾನ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು.
ಅವರು ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ & ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಪ್ರತಿತಿಂಗಳು ಆಯೋಜಿಸುವ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮದ ಅಂಗವಾಗಿ ಭಾನುವಾರ ಜರುಗಿದ 100ನೇ ತಿಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ, ಸಂಸ್ಕಾರ, ಸಂಸ್ಕೃತಿಯನ್ನು ವೇದಿಕೆಗೆ ಮಾತ್ರ ಸೀಮಿತವಾಗಿಸದೇ ಅದರಂತೆ ಬದುಕುವುದು ಮುಖ್ಯ. ಗೊಂಬೆಯಾಟ ಅಕಾಡೆಮಿ ಮೂಲಕ ನಿರಂತರವಾಗಿ ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.
ಹಳ್ಳಿಹೊಳೆಯ ಉದ್ಯಮಿ ವಿಠೋಭ ಶ್ರೀನಿವಾಸ ಶೆಣೈ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ವೆಂಕಟೇಶ ಪೈ, ಕೊಮೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ಸುಪರಿಯನ್ಟೆಂಡೆಂಟ್ ಇಂಜಿನಿಯರ್ ಯು.ಎನ್. ಆನಂದರಾಮ ಐತಾಳ್, ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಯ ಸುರೇಶ್ ತಲ್ಲೂರು ಉಪಸ್ಥಿತರಿದ್ದರು.
ಈ ವೇಳೆ ಉದ್ಯಮಿ ಕೆಳಾಕೊಡ್ಲು ವಿಠೋಭ ಶ್ರೀನಿವಾಸ ಶೆಣೈ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಸುನಿಲ್ ಹೆಚ್. ಜಿ. ಬೈಂದೂರು, ಮುದ್ರಣಗಾರ ಹರೀಶ್ ದೇವಾಡಿಗ ಉಪ್ಪೂರು, ಧ್ವನಿ ಬೆಳಕು ಸಂಯೋಜಕ ರಾಜು ಮತ್ತು ವಿಜಯ, ಉಪ್ಪಿನಕುದ್ರು ನಿವಾಸಿಗಳಾದ ಚಂದ್ರ, ರಾಧಾ, ಕಾವೇರಿ, ಶಾರದಾ ಅವರನ್ನು ಗೌರವಿಸಲಾಯಿತು.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ನಾವಡ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಅವರು ಕಾರ್ಯಕ್ರಮ ನಿರೂಪಿಸಿದರು. ಉದಯ್ ಭಂಡಾರ್ಕಾರ್ ವಂದಿಸಿದರು.
ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಬೆಳಿಗ್ಗೆ 5ಗಂಟೆಯಿಂದ ಉದಯರಾಗದಿಂದ ಆರಂಭಗೊಂಡು ಹಿಂದೂಸ್ತಾನಿ ಹಾಡುಗಳು, ಯಕ್ಷಗಾನದ ಹಾಡುಗಳ ಗಾಯನ, ಅಕಾಡೆಮಿಯ ವಿದ್ಯಾರ್ಥಿಗಳಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ, ಭಕ್ತಿರಾಗ – ಭಕ್ತಿ ಸಂಗೀತ ಹಾಗೂ ಭಜನೆ, ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾನ್ವಿತರಿಂದ ಸಂಗೀತ, ಕೊಳಲು ವಾದನ, ಭಕ್ತಿ ಸಂಗೀತ, ಬಳಿಕ ಭಾವಗೀತೆ, ಸಂಧ್ಯಾರಾಗ, ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 11 ಗಂಟೆಯ ತನಕ ಜರುಗಿದವು.