ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂತರಾಷ್ಟ್ರೀಯ ಮನ್ನಣೆ ಪಡೆದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 100ನೇ ತಿಂಗಳ ಕಾರ್ಯಕ್ರಮವು ಅ.27ರ ಭಾನುವಾರ ಬೆಳಿಗ್ಗೆ 5-00 ಗಂಟೆಯಿಂದ ರಾತ್ರಿ 11-00 ಗಂಟೆಯ ತನಕ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ನಡೆಯಲಿದೆ.
ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಟ್ರಸ್ಟ್ ಮತ್ತು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಪ್ರತಿ ತಿಂಗಳು ಗೊಂಬೆಮನೆಯಲ್ಲಿ ಆಯೋಜಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು 100 ತಿಂಗಳು ತಲುಪಿದ್ದು, 100ನೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 5ರಿಂದ ಉದಯರಾಗದಿಂದ ಆರಂಭಗೊಂಡು ಹಿಂದೂಸ್ತಾನಿ ಹಾಡುಗಳು, ಯಕ್ಷಗಾನದ ಹಾಡುಗಳ ಗಾಯನ, ಅಕಾಡೆಮಿಯ ವಿದ್ಯಾರ್ಥಿಗಳಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ, ಬೆಳಿಗ್ಗೆ 10ರಿಂದ ಭಕ್ತಿರಾಗ – ಭಕ್ತಿ ಸಂಗೀತ ಹಾಗೂ ಭಜನೆ, ಮಧ್ಯಾಹ್ನ 12-30ರಿಂದ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾನ್ವಿತರಿಂದ ಸಂಗೀತ, ಕೊಳಲು ವಾದನ, ಸಂಜೆ 5ರಿಂದ ಭಕ್ತಿ ಸಂಗೀತ, ಬಳಿಕ ಭಾವಗೀತೆ, ಸಂಜೆ 6ರಿಂದ 8:30ರ ತನಕ ಸಂಧ್ಯಾರಾಗ ಸಂಧ್ಯಾರಾಗ, ಬಳಿಕ ಯಕ್ಷಗಾನ ಪ್ರದರ್ಶನ ಇರಲಿದೆ.
ಮಧ್ಯಾಹ್ನ 2:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿಸಲಿದ್ದು, ಉದ್ಘಾಟನೆಯನ್ನು ಕೆಳಕೊಡ್ಲು ಶ್ರೀ ವೇಂಕಟೇಶ್ವರ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕರಾದ ವಿಠೋಭ ಶ್ರೀನಿವಾಸ ಶೆಣೈ ಅವರು ನೆರವೆರಿಸಲಿದ್ದಾರೆ. ಈ ವೇಳೆ ವಿವಿಧ ಅತಿಥಿಗಳು ಉಪಸ್ಥಿತರಿರಲಿದ್ದಾರೆ. ಅಂದು ವಿವಿಧ ಕ್ಷೇತ್ರದವರಿಗೆ ಸನ್ಮಾನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ತಿಳಿಸಿದ್ದಾರೆ.