ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಂಭ್ರಮದಿಂದ ತುಳಸಿ ಪೂಜೆಯನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರರನ್ನು ವಿಷ್ಣುಸಹಸ್ರನಾಮ ಶ್ಲೋಕಪಠನೆ, ಭಜನೆಗಳ ಮೂಲಕ ಆರಾಧಿಸಿದರು.
ಶ್ರೀನಿವಾಸ ಶೇಟ್ ಕುಂದಾಪುರ ತಮ್ಮ ಸಿರಿಕಂಠದಿಂದ ಭಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಅಧ್ಯಾಪಕ ರಾಮಕೃಷ್ಣ ಉಡುಪ ತುಳಸಿಪೂಜೆಯನ್ನು ನೆರವೇರಿಸಿ, ಅದರ ಮಹತ್ವವನ್ನು ತಿಳಿಸುತ್ತಾ, ನಮ್ಮ ಒಂದು ವರ್ಷದ ಆಚರಣೆ ದೇವತೆಗಳ ಒಂದು ದಿನದ ದಿನಚರಿಯಂತಿದ್ದು, ಬೆಳಗಿನ ಜಾವದ ಕರ್ತವ್ಯಗಳನ್ನು ತಿಳಿಸುವಂತಿವೆ. ಭಾರತೀಯ ಸಂಸ್ಕೃತಿಯಲ್ಲಿ ಬೆಳಿಗ್ಗೆ ಎದ್ದು ಹಸುವನ್ನು ನೋಡಬೇಕು, ತುಳಸಿಯನ್ನು ನಮಸ್ಕರಿಸಬೇಕು. ಅದಕ್ಕೆ ಕಾರ್ತಿಕ ಶುಕ್ಲಪಾಡ್ಯದಂದು ಗೋಪೂಜೆ, ದ್ವಾದಶಿಯಂದು ತುಳಸಿಪೂಜೆ ನಡೆಸುತ್ತೇವೆ. ಅರುಣೋದಯ ಕಾಲದಲ್ಲಿ ದೀಪದ ಅವಶ್ಯಕತೆ ನಮಗಿರುವುದು. ಅದರಂತೆ ದೇವತೆಗಳ ಕಾರ್ಯಗಳಿಗೆ ಅನುವು ಮಾಡಲು ದೀಪಗಳನ್ನು ಬೆಳಗಿಸುತ್ತೇವೆ ಎಂದರು. ಅನಂತರ ಸಿಡಿಮದ್ದುಗಳ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರಂಜಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳೂ, ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ, ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.