ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2023-24ನೇ ಶೈಕ್ಷಣಿಕ ವರ್ಷದ ಐ. ಸಿ.ಎಸ್.ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುವುದರ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರೀಯ ಐ. ಸಿ. ಎಸ್. ಇ. ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ 21ನೇ ಬಾರಿ ಶೇಕಡ 100 ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲೂಕಿನ ಏಕೈಕ ಶಾಲೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಪರೀಕ್ಷೆಗೆ ಹಾಜರಾದ 173 ವಿದ್ಯಾರ್ಥಿಗಳಲ್ಲಿ 119 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 54 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ತನ್ವಿಶ್ರೀ ಎಸ್. ಆಚಾರ್ ಮತ್ತು ಮಾನ್ಯ ಪೂಜಾರಿ 97.4 ಶೇಕಡಾ ಅಂಕದೊಂದಿಗೆ ಪ್ರಥಮ, ಜ್ಞಾನದೀಪ್ ವಿ. ಶೆಟ್ಟಿ 96 ಶೇಕಡಾ ಅಂಕದೊಂದಿಗೆ ದ್ವಿತೀಯ, ಪಾವನಿ ಪಾಟೀಲ್ 95.8 ಶೇಕಡಾ ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಟಾನ, ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ರಜತ ವರ್ಷದ ಸಂಭ್ರಮದಲ್ಲಿ ಎರಡು ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಸುಮಾರು 1730ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 582 ಮಕ್ಕಳಿಗೆ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಮಾದರಿ ವಸತಿ ಶಾಲೆ ಎನಿಸಿದೆ.
ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರನ್ನು ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅಭಿನಂದಿಸಿದ್ದಾರೆ.