Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ವಾಹನ ಹಸ್ತಾಂತರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸರ್ಕಾರಿ ಶಾಲೆ ಉಳಿದರೆ ಮಾತ್ರ ನಮ್ಮ ಖುಷಿ, ನೆನಪು ಹಾಗೂ ಸುಮಧುರ ಬಾಂಧವ್ಯ ಶಾಶ್ವತವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಎಲ್ಲಾ ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕೆ ಸ್ಥಳೀಯರ ಪ್ರೋತ್ಸಾಹದ ಜೊತೆಗೆ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳ ಉತ್ಸಾಹವು ಅಗತ್ಯವಾಗಿದೆ ಎಂದು ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು.

ಖಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ತಮ್ಮ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಹಸ್ತಾಂತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅದಕ್ಕೆ ಸರ್ಕಾರಿ ಶಾಲೆಯೇ ಕಾರಣವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಕೆಲವು ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಉತ್ಸಾಹ ತೋರಿದರೆ ಇನ್ನು ಕೆಲವು ಶಾಲೆಯಲ್ಲಿ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಲ್ಲಿನ ಶಿಕ್ಷಕ ವೃಂದ, ಶಾಲಾ ಎಸ್‌ಡಿಎಂಸಿ ಹಾಗೂ ಹಳೆವಿದ್ಯಾರ್ಥಿಗಳು ಕೂಡ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಸಹಕಾರ ನೀಡಬೇಕು. ಈ ಶಾಲಾ ಹಳೆ ವಿದ್ಯಾರ್ಥಿ ನೆಲೆಯಲ್ಲಿ 125ನೇ ವರ್ಷದ ಹೊಸ್ತಿನಲ್ಲಿರುವ ಈ ಶಾಲೆಯ ಅಭಿವೃದ್ಧಿಗೆ ಸಾಧ್ಯವಾದಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರಾಧಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾವತಿಯಿಂದ ವಾಹನ ದಾನಿ ಎಚ್. ಜಯಶೀಲ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಸದಸ್ಯರಾದ ರಾಜೇಶ ದೇವಾಡಿಗ, ಶಾರದಾ ದೇವಾಡಿಗ, ಮಾಜಿ ಅಧ್ಯಕ್ಷ ಸುಕೇಶ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ ಹೆಬ್ಬಾರ್, ಗೌರವಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಉಪ್ಪುಂದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಮಹಾಬಲ ಎಚ್. ಸ್ವಾಗತಿಸಿ ಪ್ರಾಸ್ತಾವಿಸಿದರು. ಸಹಶಿಕ್ಷಕ ನಾಗ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

Exit mobile version