Kundapra.com ಕುಂದಾಪ್ರ ಡಾಟ್ ಕಾಂ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ದೇಶ ಅಭಿವೃದ್ಧಿಯಾಗಬೇಕಾದರೆ ಭಾರತೀಯ ನಾರಿಶಕ್ತಿ ಎಚ್ಚೆತ್ತುಕೊಂಡು ಪುರುಷರಿಗೆ ಸರಿಸಮಾನರಾಗಿ ನಿಲ್ಲಬೇಕು. ಕಾರಣ ಸಮಾಜದಲ್ಲಿ ದೇವರಿಂದಲೂ ಸಾಧ್ಯವಾಗದ ಕೆಲವು ವಿಚಾರಗಳನ್ನು ಮಹಿಳೆಯರು ಸಾಧಿಸಿ ತೋರಿಸುತ್ತಾರೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಬಗ್ಗೆ ಇರುವ ದೃಷ್ಠಿಕೋನಗಳು ಬದಲಾಗಬೇಕಿದೆ ಎಂದು ಬೆಳಗಾವಿ ಜಿಲ್ಲೆ ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಅಶೋಕ್ ಹೇಳಿದರು.

ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆ ತರ ಪಾತ್ರ ಹಿರಿದಾಗಿದೆ. ಜ್ಞಾನವಿಕಾಸ ಒಂದು ಸಂಸ್ಕಾರಯುತ ಸಂಘಟನೆಯಾಗಿದ್ದು, ಸಾಮಾನ್ಯ ಮಹಿಳೆಯರ ಜೀವನದಲ್ಲಿ ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಸಮಾಜಮುಖಿ ಕಳಕಳಿಯನ್ನು ಬೆಳೆಸುತ್ತಿದೆ. ಎಲ್ಲಾ ಬೆರಳುಗಳು ಸಮಾನವಾಗಿಲ್ಲದಿದ್ದರೂ ಕೆಲಸ ಮಾಡುವಾಗ ಎಲ್ಲವೂ ಒಂದಾಗುವಂತೆ ಪ್ರತೀ ಒರ್ವ ಮಹಿಳೆಯಲ್ಲಿ ಅಭಿಪ್ರಾಯಗಳು ವ್ಯತಿರಿಕ್ತವಾದರೂ ಕೂಡ ಅವರಿಗೆ ಅಗತ್ಯ ವೇದಿಕೆ ನಿರ್ಮಿಸಿ ಸಮಾನರನ್ನಾಗಿಸಿದೆ. ಶಿಕ್ಷಣ, ಸಾಮಾನ್ಯ ಜ್ಞಾನ, ಆರೋಗ್ಯ, ಸ್ವ-ಉದ್ಯೋಗದ ಬಗ್ಗೆ ತರಬೇತಿ, ಮಾಹಿತಿ ಕಾರ್ಯಾಗಾರಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಿದ ಸಂಸ್ಥೆ ಇಂದು ದೇಶದ ಮನೆ ಮಾತಾಗಿದೆ ಎಂದರು.

ಧಗ್ರಾಯೋ ಬೈಂದೂರು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರುರಾಜ ಗಂಟಿಹೊಳೆ ಗೋಷ್ಠಿ ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ ಮೀನಾಕ್ಷಿ ಇವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ವಿನಾಯಕ ಪೈ., ಧಗ್ರಾಯೋ ಉತ್ತರಕನ್ನಡ ಜಿಲ್ಲಾ ನಿರ್ದೇಶಕ ಮಹೇಶ ಎಂ. ಡಿ., ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ. ಪೂಜಾರಿ, ಅಧ್ಯಕ್ಷ ಕೃಷ್ಣ ಪೂಜಾರಿ, ತಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ವಯಲಾಧ್ಯಕ್ಷರಾದ ಚಂದ್ರಶೇಖರ ದೇವಾಡಿಗ, ಪ್ರಮೀಳಾ ಗಾಣಿಗ, ಸುರೇಂದ್ರ ನಾಯ್ಕ್ ಇದ್ದರು.

ವಲಯ ಮೇಲ್ವಿಚಾರಕ ಭರತ್ ಪಟಗಾರ್ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸುರೇಖಾ ಪೂಜಾರಿ ವಂದಿಸಿದರು.

Exit mobile version