ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಯಾಕೂಬ್ ಖಾದರ್ ಗುಲ್ವಾಡಿ ಅವರ ಚೊಚ್ಚಲ ನಿರ್ದೇಶನದ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಸಿನಿಮಾಗೆ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.
ಮುಂಬೈನ ಪ್ರಭನಾರಾಯಣ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದರು. ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಕರಾಗಿದ್ದರು. ಎಡಿಟರ್-ಕಲರೀಸ್ಟ್-ಮೋಹನ್ ಎಲ್ ರಂಗ ಕಹಳೆ, ಸೌಂಡ್ ಮಿಕ್ಸಿಂಗ್-ಮುನೀಬ್ ಅಹಮದ್, ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್-ಗಿರೀಶ್ ಬಿ.ಎಮ್, ವಸ್ತ್ರವಿನ್ಯಾಸ-ಇಸ್ಮಾಯಿಲ್ ಸರ್ಫುದ್ದೀನ್, ಕಲೆ- ಎ.ಕೆ.ಗುಲ್ವಾಡಿ, ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಸಹ ನಿರ್ದೇಶನ ಮಾಡಿದ್ದರು.
ಕಲಾವಿದರಾಗಿ ರೂಪ ವರ್ಕಾಡಿ, ನವ್ಯ ಪೂಜಾರಿ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಮ್. ಕೆ.ಮಠ, ವಿಶೇಷ ಪಾತ್ರದಲ್ಲಿ ಕುಂದಾಪುರದ ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ ಮತ್ತು ಎ.ಎಸ್.ಎನ್ ಹೆಬ್ಬಾರ್ ಸಹಿತ ಉಮರ್ ಯು.ಹೆಚ್, ಸುಬ್ರಹ್ಮಣ್ಯ ಶೆಟ್ಟಿ, ನಾರಾಯಣ ಸುವರ್ಣ, ಪ್ರಭಾ ಸುವರ್ಣ, ಎಸ್. ಎಸ್ ಹನೀಫ್, ಜಮಾಲ್ ಕುದ್ರುಮಕ್ಕಿ, ಜಿ.ಟಿ.ಮೊಯಿದೀನ್, ಪಕ್ಕೂರಾಕ, ಬೀಡಿ ಉಸ್ಮಾನಾಕ, ಜಾನೇಟ್, ಅಸ್ಲಮ್ ಕುಂಬ್ರ, ಚಂದ್ರಣ್ಣ,ಸಾದೀಕ್ ಆಲಿ, ಜಾಫರ್, ಕಾವ್ಯ ಮಯ್ಯ, ಆಮೀರ್ ಹಂಝ, ಐಶ್ವರ್ಯ, ಪ್ರತೀಕ್ಷ ,ಮಲ್ಲಿಕಾ ಟೀಚರ್, ಮಾಧುರಿ,ಸರೋಜ ಸುರೇಶ್, ಇಕ್ಬಾಲ್ ಎಸ್, ದಿನೇಶ್ ಬೆಟ್ಟ, ಮಾಸ್ಟರ್ ಇಫ್ರಾಝ್, ಮಾಸ್ಟರ್ ಫಹಾದ್ ಯಾಕೂಬ್, ಬೇಬಿ ಫಹಿಮತುಲ್ ಯುಶ್ರ,ಮಾಸ್ಟರ್ ಸಿಮಾಝ್ ತೆರೆಮೇಲೆ ಕಾಣಿಸಿಕೊಂಡಿದ್ದರು.
ಈಗಾಗಲೇ ಈ ಸಿನೆಮಾ ನೈಜೀರಿಯಾದಲ್ಲಿ ನಡೆದ ಅಬುಜ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ವಿಭಾಗದಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಭಾರತದ ಉಪಭಾಷೆಗಳು ವಿಭಾಗದಲ್ಲಿ ಪ್ರದರ್ಶನ ಕಂಡಿದ್ದಲ್ಲದೆ ಅಮೇರಿಕ, ಇಂಗ್ಲೆಂಡ್ ಸೇರಿದಂತೆ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ತ್ರಿಪಲ್ ತಲಾಖ್ ಸಿನಿಮಾ ಸಮುದಾಯವೊಂದರ ಮಾನವೀಯ ಸಂವೇದನೆಗಳಿಗೆ ಹಿಡಿದ ಭಾವನಾತ್ಮಕ ಕನ್ನಡಿ. ತಲಾಖ್ ಎಂಬ ಮೂರಕ್ಷರವನ್ನು ಒಂದೇ ಉಸಿರಲ್ಲಿ ಮೂರು ಬಾರಿ ಹೇಳಿ ಬಿಟ್ಟರೆ ಸಂಬಂಧಗಳು ಮುರಿದೇ ಹೋಗುತ್ತವೆ ಎಂಬ ಅಪಕಲ್ಪನೆಯ ಹಿಂದಿರುವ ನೋವು, ತಲ್ಲಣಗಳಿಗೆ ಮೂರ್ತ ರೂಪ ಕೊಟ್ಟ ಕುಂದಾಪುರದ ಕ್ರಿಯಾಶೀಲ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿಯವರ ಈ ಚಲನಚಿತ್ರ ಒಂದು ಸಾಮಾಜಿಕ ಜವಾಬ್ದಾರಿಯ ರೂಪದಲ್ಲಿ ತೆರೆಯಲ್ಲಿ ಸೆರೆಯಾದ ದೃಶ್ಯಗಳಾಗಿದೆ. ಅಮಾನುಷ ಸಂಪ್ರದಾಯವನ್ನು ಬಳಸಿಕೊಂಡು ಕುಟುಂಬದ ಮೂಲ ನೆಲೆಯನ್ನೇ ಛಿದ್ರಗೊಳಿಸುವ ಸಮಯ ಸಾಧಕರ ಹಿಂದಿರುವ ನಗ್ನ ಸತ್ಯದ ದರ್ಶನದಂತಿರುವ ಈ ಸಿನಿಮಾ ಸಮುದಾಯದ ಮಹಿಳೆಯರನ್ನು ದಿಗ್ಭ್ರಾಂತಗೊಳಿಸುವ ತಲಾಖ್ ವಿರುದ್ಧ ಜಾಗೃತಿಯ ಸಂದೇಶ ಹರಡುತ್ತಾ ಸಮಸ್ಯೆಯ ದಾರುಣತೆಯನ್ನು ವಿಷಾದೀಕರಿಸುತ್ತಾ ಹೋಗುತ್ತದೆ. ಮುಂದುವರಿದ ಜಗತ್ತಿನ ಕಪ್ಪು ಚುಕ್ಕೆಯಂತಿರುವ ತ್ರಿವಳಿ ತಲಾಖ್ ವಿಚಾರದ ಅಮೂಲಾಗ್ರ ವಿಶ್ಲೇಷಣೆಯೊಂದಿಗೆ ಅಂತರಂಗವನ್ನು ಕೆಣಕುವ ಮತ್ತು ಆತ್ಮ ವಿಮರ್ಶೆ ಮಾಡುವಂತೆ ‘ಟ್ರಿಪಲ್ ತಲಾಖ್- ಕುರ್ ಆನ್ ಹೇಳಿಲ್ಲ’ ಚಿತ್ರ ಪ್ರೇರೇಪಿಸಿತ್ತು.
ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ರಿಸರ್ವೇಶನ್ ಕನ್ನಡ ಸಿನಿಮಾ ನಿರ್ಮಿಸಿ ಅದಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು.

