ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ತಾಲ್ಲೂಕಿನ ವಂಡಾರು ಗ್ರಾಮದ ಬೋರ್ಡ್ ಗಲ್ಲು ಎಂಬಲ್ಲಿ ವನ್ಯಪ್ರಾಣಿಗಳ ಹತ್ಯೆಗೈಯ್ಯಲು ವಂಡಾರು ಬ್ಲಾಕ್ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಬಂದ ಭಟ್ಕಳ – ಶಿರೂರು ಮೂಲದ ಮೂವರು ವನ್ಯಜೀವಿ ಹಂತಕ ಆರೋಪಿಗಳನ್ನು ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ. ಭಟ್ಕಳದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯಾ, ಶಿರೂರಿನವರಾದ ವಾಸೀಂ ಅಕ್ರಂ, ಆಲಿ ಬಾವು ಯಾಸಿನ್ ಬಂಧಿತರು.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆರೋಪಿಗಳಿಂದ ಒಂದು ಬಂದೂಕು, 11 ಕಾಡತೂಸು, 4 ಚಾಕುಗಳು, 01 ಮಚ್ಚು, 01 ಟಾರ್ಚ್, 03 ಮೊಬೈಲುಗಳು ಹಾಗೂ ಸಂಚಾರಕ್ಕೆ ಬಳಸಿದ ಒಂದು ಆಟೋ ರಿಕ್ಷಾವನ್ನು ವಶ ಪಡೆಯಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಅರೋಪಿಗಳು ಶಂಕರನಾರಾಯಣ ಅರಣ್ಯ ವಲಯದ ವಂಡಾರಿನ ಬಳಿ ಕಾಡು ಪ್ರಾಣಿಯನ್ನು ಹತ್ಯೆಗೈದು, ಕಾಡು ಪ್ರದೇಶದಲ್ಲಿ ಕರುಳನ್ನು ಎಸೆದಿದ್ದರು. ಇದರ ಸ್ಯಾಂಪಲ್ ಭಾರತೀಯ ವೈಡ್ ಲೈಫ್ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದು ಕಾಡುಕೋಣ ಎಂಬುದಾಗಿ ದೃಢಪಟ್ಟಿರುತ್ತದೆ. ವನ್ಯಪ್ರಾಣಿ ಹತ್ಯೆ ಮಾಡಲಾದ ಸ್ಥಳದಲ್ಲಿ ಈ ಆರೋಪಿಗಳ ಪೋನ್ ಲೋಕೇಶನ್ ಪತ್ತೆಯಾಗಿತ್ತು. ಅಲ್ಲಿಂದ ಈ ಆರೋಪಿಗಳಿಗೆ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ಹವ್ಯಾಸಿ ವನ್ಯಜೀವಿ ಬೇಟೆಗಾರರಾಗಿದ್ದು ಉಡುಪಿ, ಶಿವಮೊಗ್ಗ ಸೇರಿ ಬೇರೆ ಬೇರೆ ವಲಯಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ.
ಶಿವಮೊಗ ಜಿಲ್ಲೆ ಸಾಗರ ವಿಭಾಗದ ನಗರ ವಲಯದಲ್ಲಿ ವನ್ಯಜೀವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸರಣಿ ಕಳ್ಳಬೇಟೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು ಅರಣ್ಯ ಪ್ರದೇಶದ ಒಳಗೆ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಗಣಪತಿ ಕೆ. ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ ಪೂಜಾರಿ, ಸಿದ್ಧಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಜಿ.ಡಿ. ದಿನೇಶ ಅವರ ಮಾರ್ಗದರ್ಶನದಲ್ಲಿ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಜ್ಯೋತಿ ಕೆ.ಸಿ. ಹಾಗೂ ವಲಯದ ಸಿಬ್ಬಂದಿಗಳು, ಬೈಂದೂರು ವಲಯದ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ವಲಯದ ಸಿಬ್ಬಂದಿಗಳು, ಸಿದ್ಧಾಪುರ ವಲಯ ಅರಣ್ಯಾಧಿಕಾರಿ ಗಣಪತಿ ವಿ. ನಾಯ್ಕ್ ಹಾಗೂ ಸಿಬ್ಬಂದಿಗಳು, ಕುಂದಾಪುರ ವಲಯದ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

