Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಭಾಷೆ & ಸಂವಹನ ಕಲೆ ಉಪನ್ಯಾಸ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಭಾಷೆ ಒಂದು ಜನಾಂಗ ಮತ್ತು ಸಂಸ್ಕೃತಿಯ ಅಸ್ಮಿತೆ. ಭಾಷೆಯ ಬಳಕೆಯಿಂದ ಅದರ ಉಳಿವು ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ. ವ್ಯಕ್ತಿಗೆ ಅಭಿವ್ಯಕ್ತಿಯಿಂದಲೇ ನೆಲೆ ಮತ್ತು ಬೆಲೆ. ಕಾಲೇಜು ಹಂತದಲ್ಲಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಸಮರ್ಥ ಸಂವಹನಕಾರರಾದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಬಹುದೆಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾದ್ಯಾಪಕ ಸಂಜೀವ ಕುದ್ಪಾಜೆ ಹೇಳಿದರು.

ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಐಕ್ಯೂಎಸಿ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಭಾಷೆ ಮತ್ತು ಸಂವಹನ ಕಲೆ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ವಿದ್ಯಾರ್ಥಿಗಳು ಸಂವಹನ ಕಲೆಯನ್ನು ಕರಗತ ಮಾಡಿಕೊಂಡು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬಹುದಾಗಿದೆ ಎಂದರು.

ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಪ್ರತಿನಿಧಿಗಳಾದ ರಶ್ಮಿ ಉಡುಪ ಮತ್ತು ಶಮಂತ ಕುಲಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗರಾಜ ವೈದ್ಯ ಎಂ., ಸ್ವಾಗತಿಸಿದರು. ಕವನ ಮತ್ತು ತಂಡದವರು ಪ್ರಾರ್ಥಿಸಿದರು. ಕೃತಿಕಾ ಕಾರ್ಯಕ್ರಮವನ್ನು ನಿರೂಪಿಸಿದರೆ, ಪ್ರಥಮ ಎಂ.ಕಾಂ. ನ ರಶ್ಮಿ ಉಡುಪ ಕೊನೆಯಲ್ಲಿ ವಂದಿಸಿದರು.

Exit mobile version