Kundapra.com ಕುಂದಾಪ್ರ ಡಾಟ್ ಕಾಂ

ಮರೆಯಲಾರದ ಸವಿಯಣ್ಣ ನುಡಿಸಿರಿಯ ಈ ಬೊಂಬಾಟ್ ಭೋಜನ!

ಅಪಾರ ಉಜಿರೆ.

ಒಂದು ದಿನ ಮನೆಗೆ ನೆಂಟರಿಷ್ಟರು ಬಂದರೆ ಆವರು ಮರಳಿ ಹೋಗುವುದನ್ನೇ ಕಾಯುತ್ತಿರುತ್ತೇವೆ. ಸಾಲದ್ದಕ್ಕೆ ಮಕ್ಕಳ ಮೂಲಕ ‘ಅಂಕಲ್, ಆಂಟಿ ನೀವು ಯಾವಾಗ ಹೋಗ್ತೀರಾ’ ಎಂದು ಕೇಳಿಸುವ ಪರಿಪಾಠದ ನಡುವೆ ಯಾರೊಬ್ಬರಿಗೂ ತೊಂದರೆಯಾಗದಂತೆ ದಿನಂಪ್ರತಿ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಜನರಿಗೆ ಬಗೆ ಬಗೆಯ ಭಕ್ಷ, ಭೋಜನಗಳ ಉಪಚಾರ ಅಚ್ಚುಕಟ್ಟಾಗಿ ಸದ್ದಿಲ್ಲದೇ ಸಾಗುತ್ತಿದೆ. ಇದು ಸಾಧ್ಯವಾಗುವುದು ಆಳ್ವಾಸ್ ನುಡಿಸಿರಿಯಲ್ಲಿ.

ಏಕಕಾಲದಲ್ಲಿ ನುಡಿಸಿರಿಯ ವಿವಿಧ ವೇದಿಕೆಗಳಲ್ಲಿ ನಡೆಯುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳು ಬುದ್ಧಿಯ ಹಸಿವನ್ನು ತಣಿಸಿದರೇ, ಆಳ್ವಾಸ್‌ನ ಭೋಜನಾಲಯದಲ್ಲಿ ತಯಾರಾಗುವ ಖಾದ್ಯಗಳು ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸಾಹಿತ್ಯಪ್ರೀಯರ ಹೊಟ್ಟೆಯನ್ನು ತಂಪಾಗಿರಿಸುತ್ತಿವೆ. ಅಡುಗೆ ಮನೆಯಲ್ಲಿ ಅನ್ನ, ಸಾಂಬಾರ್, ಮೊಸರು, ಪಲ್ಯ ಮೊದಲಾದವುಗಳು ಒಂದೆಡೆ ತಯಾರಾದರೆ ಇನ್ನೊಂದೆಡೆ ಸಿಹಿತಿಂಡಿಗಳು ಪ್ರತ್ಯೇಕವಾಗಿ ತಯಾರಾಗುತ್ತವೆ.

ಒಟ್ಟು ೨೪ ಕೌಂಟರ್‌ಗಳಲ್ಲಿ ಬೆಳಗ್ಗೆ 7ಗಂಟೆಯಿಂದ ರಾತ್ರಿ 10:30೦ರ ವರೆಗೆ ನಡೆಯುವ ಈ ಸಂತರ್ಪಣಾ ಕಾರ್ಯಕ್ರಮಕ್ಕೆ ಆಹಾರ ಸರಬರಾಜಾಗುವುದು ಕ್ಯಾಂಪಸ್‌ನ ಆವರಣದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ. ನಾಲ್ಕೂ ದಿನಗಳ ಆಹಾರ ತಯಾರಿಕೆಯ ಹೊಣೆಯನ್ನು ನಗರದ ಮಹಾವೀರ ಹೋಟೆಲ್‌ನ ಸನತ್ ಕುಮಾರ್ ಜೈನ್‌ರ ತಂಡವು ವಹಿಸಿಕೊಂಡಿದೆ. ತಯಾರಿ ಮತ್ತು ವಿತರಣೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಎಲೆಮರೆಯ ಕಾಯಿಯಂತೆ ನಿರ್ವಹಿಸುತ್ತಿರುವುದು ಆಳ್ವಾಸ್‌ನ ಪ್ರಮೋದ್ ಹೆಗ್ಡೆಯವರ ನೇತೃತ್ವದ ‘ಹಿತೈಷಿ’ ಎಂಬ ಎಂಭತ್ತು ಸದಸ್ಯರ ಸಮಾನ ಮನಸ್ಕರ ಸಂಘಟನೆ.

ದಿನವೊಂದಕ್ಕೆ ಸುಮಾರು ತಲಾ ಒಂದೂವರೆ ಸಾವಿರ ಲೀಟರ್‌ಗಳಷ್ಟು ಹಾಲು ಮತ್ತು ಮೊಸರನ್ನು ವ್ಯಯಿಸಲಾಗುತ್ತಿದೆ. ಹೀಗೆ ತಾಯರಾದ ಆಹಾರವು ಎಲ್ಲಾ ೨೪ ಕೌಂಟರ್‌ಗಳಿಗೆ ರವಾನೆಯಾಗುತ್ತದೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ವಿವಿಐಪಿಗಳಿಂದ ಮೊದಲ್ಗೊಂಡು ಸಣ್ಣ ಮಕ್ಕಳು, ಸ್ವಯಂ ಸೇವಕರು, ಪ್ರತಿನಿಧಿಗಳು, ಕಲಾವಿದರು ಹೀಗೆ ಎಲ್ಲರಿಗೂ ಒಂದೇ ರೀತಿಯ ಮೆನು. ಇದರಲ್ಲಿ ಒಂದು ಉಪ್ಪಿನ ಕಾಯಿಯೂ ಬದಲಾಗುವುದಿಲ್ಲ ಎನ್ನುತ್ತಾರೆ ಪ್ರಮೋದ್. ಎರಡನೇ ದಿನದ ಬೆಳಗ್ಗಿನ ಉಪಾಹಾರಕ್ಕೆಂದು ಚನ್ನೈನಿಂದ ಹಲ್ವಾವನ್ನು ತರಿಸಿ ಉಣಬಡಿಸಿದ್ದು ಮತ್ತೊಂದು ವಿಶೇಷ. ಊಟ, ಉಪಾಹಾರ ಮುಗಿದ ಕೂಡಲೆ ಕೆಲವೇ ಕ್ಷಣಗಳಲ್ಲಿ ತಟ್ಟೆಗಳು, ವೇಸ್ಟೇಜ್‌ಗಳು ಮಿಜಾರಿನಲ್ಲಿರುವ ತೋಟಕ್ಕೆ ಗೊಬ್ಬರ ರೂಪದಲ್ಲಿ ಬಳಸಲಾಗುತ್ತದೆ.

ಬೆಳಗ್ಗಿನ ಉಪಾಹಾರದಲ್ಲಿ ಇಡ್ಲಿ, ಸಾಂಬರ್, ಶೀರ, ಅವಲಕ್ಕಿ, ಚನ್ನೈ ಹಲ್ವ, ಜೈನ್ ಕೇಕ್, ಕಾಶಿ ಹಲ್ವ, ಉಪ್ಪಿಟ್ಟು, ಟೊಮೇಟೋ ಬಾತ್, ಶ್ಯಾವಿಗೆ ಬಾತ್, ಕಾಫಿ, ಟೀ ಮಧ್ಯಾಹ್ನದ ಭೋಜನಕ್ಕೆ ಉಪ್ಪಿನಕಾಯಿ, ಕಡ್ಲೆ, ಬಟಾಣಿ ಗಸಿ, ಚಪಾತಿ, ಅನ್ನ, ಸಾಂಬರ್, ವಿವಿಧ ಕಾಳಿನ ಪಲ್ಯಗಳು, ತೋವೆ, ಮೊಸರು, ಅಪ್ಟೆ ಪಾಯಸ, ಶ್ಯಾವಿಗೆ ಪಾಯಸ, ಕಡ್ಲೆ ಬೇಳೆ ಪಾಯಸ, ವೆಜ್ ಕೂರ್ಮಾ, ರವೆ ಲಾಡು, ಬೋಂದಿ ಲಾಡು, ಹೋಳಿಗೆ ರಸಾಯನ, ಮತ್ತು ರಾತ್ರಿಯ ಊಟಕ್ಕೆ ಉಪ್ಪಿನ ಕಾಯಿ, ಪಲ್ಯ, ಗಸಿ, ಪಾಯಸ, ಚಪಾತಿ, ಮೊಸರು ಹೀಗೆ ಬಗೆ ಬಗೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ತಯಾರಾದ ಆಹಾರವು ವಿವಿಧೆಡೆಯಿಂದ ಆಗಮಿಸಿರುವ ಸುಮಾರು ಒಂದೂವರೆ ಸಾವಿರ ಸ್ವಯಂಸೇವಕರ ಮೂಲಕ ವಿತರಣೆಯಾಗುತ್ತಿದೆ.

Exit mobile version